ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಪುತ್ತಳಿಗೆ ಕಿಡಿಗೇಡಿಗಳು ಹಾನಿ ಎಸಗಿದ ಕಾರನ ಸ್ಥಳದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಬಲಮುರಿ ಸೇವಾ ಸಮಿತಿಯಿಂದ ನಿರ್ಮಾಣಗೊಂಡ ಡಾ.ರಾಜ್ ಕುಮಾರ್ ಪ್ರತಿಮೆಯು ನವೆಂಬರ್23ಕ್ಕೆ ಅನಾವರಣಗೊಳ್ಳಲು ಸಿದ್ದವಾಗಿತ್ತು.
ಅನಾವರಣ ಸ್ಥಿತಿಯಲ್ಲಿದ್ದ ಡಾ.ರಾಜ್ ಕುಮಾರ್ ಪ್ರತಿಮೆಗೆ ಇಂದು ಬೆಳಗ್ಗೆ ಕಿಡಿಗೇಡಿಗಳ ಗುಂಪೊಂದು ಹಾನಿ ಮಾಡುವ ಮೂಲಕ ಅಪಮಾನ ಎಸಗಿದೆ.
ಅಭಿಮಾನಿಗಳಿಂದ ನಿರ್ಮಾಣಗೊಂಡಿದ್ದ ಡಾ.ರಾಜ್ ಪುತ್ಥಳಿಗೆ ದುಷ್ಕರ್ಮಿಗಳ ಗುಂಪೊಂದು ಹಾನಿ ಮಾಡಿರುವುದು ಇಂದು ಬೆಳಗ್ಗೆ ತಿಳಿದುಬಂದಿದೆ. ಪುತ್ಥಳಿಗೆ ಹಾನಿ ಮಾಡಿರುವುದನ್ನು ಕಂಡ ಡಾ.ರಾಜ್ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೆ ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದು, ದುಷ್ಕರ್ಮಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಧಾವಿಸಿರುವ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪುತ್ಥಳಿಯ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿಭದ್ರತೆ ಕೈಗೊಂಡಿದ್ದಾರೆ.
