ಬಂಟ್ವಾಳ: ತಾಲ್ಲೂಕಿನ ಪುಂಚೋಡಿ ಸಮೀಪದ ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ ಆಮಂತ್ರಣ ಪತ್ರ ಬುಧವಾರ ಬಿಡುಗಡೆಗೊಂಡಿತು. ಟ್ರಸ್ಟ್ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಶ್ರೀಪತಿ ಭಟ್ ಪುಂಚೋಡಿ ಮತ್ತಿತರರು ಇದ್ದಾರೆ.

ಬಂಟ್ವಾಳ ಪುಂಚೋಡಿ ಸಮೀಪದ ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ೩೦ರಂದು ಲೋಕಾರ್ಪಣೆಗೊಳ್ಳಲಿರುವ ನೂತನ ಕಟ್ಟಡದ ಆಮಂತ್ರಣ ಪತ್ರವನ್ನು ಮಂಗಳೂರಿನ ಕಾಟಿಪಳ್ಳ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಇವರು ಬುಧವಾರ ಬಿಡುಗಡೆಗೊಳಿಸಿದರು. ‘ಸುಮಾರು ೫೦ ವರ್ಷಗಳ ಹಿನ್ನೆಲೆ ಹೊಂದಿರುವ ಈ ಶಾಲೆಗೆ ರೂ ೪೫ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು, ಇದೇ ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಅಸ್ರಣ್ಣ ಉದ್ಘಾಟಿಸುವರು’ ಎಂದು ಅವರು ಹೇಳಿದರು.
ಅಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರಿಮಲೆ ಚರ್ಚಿನ ಧರ್ಮಗುರು ಲಿಯೋ ವೇಗಸ್, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಶಾಲಾ ಸಂಚಾಲಕ ಶ್ರೀಪತಿ ಭಟ್ ಪುಂಚೋಡಿ ಮಾತನಾಡಿ, ‘ಸುಮಾರು ೫೦ ಮಂದಿ ವಿದ್ಯಾರ್ಥಿಗಳಿಗೆ ಮೂವರು ಪ್ರತ್ಯೇಕ ಶಿಕ್ಷಕಿಯರ ನೇಮಕ ಸಹಿತ ಎಲ್ ಕೆ ಜಿ ಮತ್ತು ಯು ಕೆ ಜಿ ಆರಂಭಿಸಲು ಇಲ್ಲಿನ ಟ್ರಸ್ಟ್ ಮತ್ತು ಜ್ಞಾನ ದೇಗುಲ ನಿರ್ಮಾಣ ಸಮಿತಿ ಅವಿರತ ಶ್ರಮವಹಿಸಿದೆ ಎಂದರು. ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ ಕುಮಾರ್ ಜೈನ್ ಪೀರ್ದಬೆಟ್ಟು, ಉಪಾಧ್ಯಕ್ಷ ಕೆ.ಎನ್.ಶೇಖರ್, ಕೋಶಾಧಿಕಾರಿ ಜಯ ಕುಂದರ್ ಬಾಲೇಶ್ವರ, ಪ್ರಮುಖರಾದ ಕೇಶವ ಪೂಜಾರಿ ಅಸಲ್ದೋಡಿ, ಸಿಲ್ವೆಸ್ಟರ್ ಫೆರ್ನಾಂಡಿಸ್ ಮತ್ತಿತರರು ಇದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿ, ಮುಖ್ಯಶಿಕ್ಷಕ ದೊಡ್ಡಪ್ಪ ಎಚ್.ವಂದಿಸಿದರು.