ಬಂಟ್ವಾಳ: ತಾಲ್ಲೂಕಿನ ನಂದಾವರ ದೇವಳದಲ್ಲಿ ಗರ್ಭಗುಡಿ ಮತ್ತು ತೀರ್ಥಮಂಟಪಕ್ಕೆ ತಾಮ್ರ ಹೊದಿಕೆ ಅಳವಡಿಸಲಾಗುತ್ತಿದೆ.

ಸುಮಾರು ೧ ಸಾವಿರ ವರ್ಷಗಳಿಗೂ ಮಿಕ್ಕಿ ಹಿನ್ನೆಲೆ ಹೊಂದಿರುವ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ರೂ ೨ ಕೋಟಿ ವೆಚ್ಚದಲ್ಲಿ ದೇವರ ಗರ್ಭಗುಡಿ ಮತ್ತು ತೀರ್ಥಮಂಟಪ ಸಹಿತ ವಿನಾಯಕ ಮತ್ತು ದುರ್ಗಾಂಬ ದೇವರ ಗರ್ಭಗುಡಿಗೆ ತಾಮ್ರದ ಹೊದಿಕೆ ಅಳವಡಿಸಲಾಗುತ್ತಿದ್ದು, ಜ.೨೯ರಿಂದ ಫೆ.೩ರತನಕ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಕೆ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಇಲ್ಲಿನ ನಂದಾವರ ಕ್ಷೇತ್ರದಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಜಿಪ ಮಾಗಣೆಯ ಸಜಿಪಮುನ್ನೂರು, ಸಜಿಪಮೂಡ, ಸಜಿಪನಡು ಮತ್ತು ಸಜಿಪಪಡು ನಾಲ್ಕು ಗ್ರಾಮಗಳ ಭಕ್ತರು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ದೇವಳದ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ ಎಂದರು.
ಕಳೆದ ೧೯೮೪ ಮತ್ತು ೨೦೦೫ರಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದು, ಇದೀಗ ಸಾನಿಧ್ಯ ವೃದ್ಧಿಗಾಗಿ ಮತ್ತೆ ಬ್ರಹ್ಮಕಲಶ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದರು. ಈ ಹಿಂದೆ ನಂದ ಅರಸರು ಆಳ್ವಿಕೆ ನಡೆಸಿದ್ದ ಊರು ಕ್ರಮೇಣ ನಂದಾವರವಾಗಿದ್ದು, ಇಲ್ಲಿನ ವಿನಾಯಕ ದೇವರಿಗೆ ಸಲ್ಲಿಸುವ ‘ಅಪ್ಪದ ಸೇವೆ’ ಜಿಲ್ಲೆಯಾದ್ಯಂತ ಪ್ರಾಮುಖ್ಯತೆ ಪಡೆದಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದಿರುವ ದೇವಳವು ಧಾರ್ಮಿಕತೆ ಜೊತೆಗೆ ಸಾಮಾಜಿಕ ಚಟುವಟಿಕೆಯಿಂದಲೂ ಗುರುತಿಸಿಕೊಂಡಿದೆ. ಪಾಣೆಮಂಗಳೂರಿನಿAದ ನೇತ್ರಾವತಿ ನದಿ ಬದಿ ನೂತನ ರಸ್ತೆ ನಿರ್ಮಾಣ ಕಾಮಗಾರಿಯೂ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಸಮಿತಿ ಕಾರ್ಯಾಧ್ಯಕ್ಷ ಕೆ. ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಪ್ರಧಾನ ಅರ್ಚಕ ಮಹೇಶ್ ಭಟ್, ಪ್ರಮುಖರಾದ ರಾಮಪ್ರಸಾದ್ ಪೂಂಜ, ಜಯಶಂಕರ ಬಾಸ್ರಿತ್ತಾಯ, ಯಶವಂತ ದೇರಾಜೆಗುತ್ತು, ದಾಮೋದರ ಬಿ.ಎಂ. ಮಾರ್ನಬೈಲು, ಅರುಣ್ ಕುಮಾರ್ ಕುಕ್ಕುದಕಟ್ಟೆ, ಮೋಹನದಾಸ ಹೆಗ್ಡೆ, ಸಚಿನ್ ಮೆಲ್ಕಾರ್, ಗಣೇಶ್ ಕಾರಾಜೆ, ಲೋಹಿತ್ ಪಣೋಲಿಬೈಲು, ದೇವಪ್ಪ ನಾಯ್ಕ, ಜಯಶ್ರೀ ಅಶೋಕ್ ಗಟ್ಟಿ, ಭಕ್ತಕುಮಾರ್ ಶೆಟ್ಟಿ ಮಾಡಂತಾಡಿ, ಭಾಸ್ಕರ್ ಕಂಪದಕೋಡಿ, ರಾಮಕೃಷ್ಣ ಭಂಡಾರಿ, ಯಕ್ಷಿತ್ ಕುಲಾಲ್ ಮತ್ತಿತರರು ಇದ್ದರು.