ಬಂಟ್ವಾಳ:ರಾಜ್ಯದಲ್ಲಿ ಸುಮಾರು 80ಸಾವಿರಕ್ಕೂ ಮಿಕ್ಕಿ ವಕೀಲರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 17ಸಾವಿರ ಮಂದಿ ಮಹಿಳಾ ವಕೀಲರಿದ್ದಾರೆ. ಪ್ರಸಕ್ತ ಶೇ.30ರಿಂದ 40ರಷ್ಟು ಮಂದಿ ಬೇರೆ ವೃತ್ತಿ ಆಯ್ದುಕೊಂಡಿದ್ದು, ನಿರಂತರವಾಗಿ ತನ್ನ ಕಕ್ಷಿಗಾರರ ಬಗ್ಗೆ ಚಿಂತಿಸುತ್ತಾ ವಕೀಲ ವೃತ್ತಿಯಲ್ಲಿನ ಸಕ್ರಿಯ ಸದಸ್ಯರು ಮತ್ತು ಅವರ ಕುಟುಂಬಿಕರಿಗೆ ಅಪಘಾತ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯ ತುರ್ತು ಅಗತ್ಯವಿದೆ. ಇದಕ್ಕಾಗಿ ರಾಜ್ಯ ವಕೀಲರ ಪರಿಷತ್ ಈಗಾಗಲೇ ಸರ್ಕಾರಕ್ಕೆ ಸೂಕ್ತ ವರದಿ ಸಿದ್ಧಪಡಿಸಿ ಒಪ್ಪಿಸಲಾಗಿದ್ದು, ಈಗಾಗಲೇ ಇರುವ ರೂ.4ಲಕ್ಷ ಮೊತ್ತದ ಅಪಘಾತ ವಿಮೆಗೆ ಬದಲಾಗಿ ರೂ 8 ಲಕ್ಷಕ್ಕೆ ಏರಿಸಲು ಆಗ್ರಹಿಸಲಾಗಿದೆ ಎಂದು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಪದ್ಮಪ್ರಸಾದ ಹೆಗ್ಡೆ ಹೇಳಿದ್ದಾರೆ.
ತಾಲ್ಲೂಕಿನ ವಕೀಲರ ಸಂಘ ಮತ್ತು ಕಾನೂನು ಸೇವೆಗಳ ಸಮಿತಿ ವತಿಯಿಂದ ಬಿ.ಸಿ.ರೋಡ್ನಲ್ಲಿ ಬುಧವಾರ ಏರ್ಪಡಿಸಿದ್ದ ‘ಕಾನೂನು ದಿನಾಚರಣೆ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು. ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ಒಟ್ಟಾಗಿ ಕಾನೂನು ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ ಡಿ.ಆರ್. ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಚರ್ಚೆ ಮತ್ತು ಕಾನೂನು ದಿನಾಚರಣೆ ಸೂಕ್ತ ವೇದಿಕೆ ಆಗಿದೆ ಎಂದರು.
ವಕೀಲರ ಪರಿಷತ್ತಿನ ಮಾಜಿ ಉಪಾಧ್ಯಕ್ಷ ಟಿ.ನಾರಾಯಣ ಪೂಜಾರಿ ಮಾತನಾಡಿ, ವಕೀಲರ ಸಂಘದ ಚುನಾವಣೆಯಲ್ಲಿ ಹೆಂಡ ಮತ್ತು ಹಣ ಹರಿದಾಡಿದರೆ ವಕೀಲರ ವೃತ್ತಿ ಗೌರವಕ್ಕೆ ಚ್ಯುತಿ ತರುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಪದ್ಮಪ್ರಸಾದ್ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ವಕೀಲರಾದ ಎಂ.ಎಸ್.ಆಲಿ, ಅರ್ಚನಾ ಪ್ರಸಾದ್ ಮತ್ತಿತರರು ಇದ್ದರು.
ಸಂಘದ ಉಪಾಧ್ಯಕ್ಷ ರಿಚಾರ್ಡ್ ಕೋಸ್ತ ಎಂ. ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಶೇಖರ ಪುಂಚಮೆ ವಂದಿಸಿದರು. ವಕೀಲ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
