ಬಂಟ್ವಾಳ: ಪುರಸಭೆಯಲ್ಲಿ ಸ್ಪಷ್ಟ ಬಹುಮತರೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೇಸ್ ಅಧಿಕಾರಾವಧಿಯ ಹದಿನಾಲ್ಕು ತಿಂಗಳ ಬಳಿಕ ಸ್ಥಾಯಿ ಸಮಿತಿ ರಚನೆಗೆ ಸಿದ್ದತೆಯಲ್ಲಿದೆ.
ಈ ಸಂಬಂಧವಾಗಿ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪರವರ ಅಧ್ಯಕ್ಷತೆಯಲ್ಲಿ ಪಕ್ಷದ ಎರಡು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಆಲಿ ಹಾಗೂ ಪುರಸಭೆಯ ಕಾಂಗ್ರೇಸ್ ಸದಸ್ಯರು ಮಂಗಳವಾರ ಸಚಿವ ರಮಾನಾಥ ರೈಯವರ ಬಿ.ಸಿರೋಡಿನಲ್ಲಿರುವ ಕಚೇರಿಯಲ್ಲಿ ಸಭೆ ಸೇರಿ ಸುದೀರ್ಘ ಚರ್ಚೆ  ನಡೆಸಿದ್ದಾರೆ.
ಆದರೆ ಈ ಸಭೆಗೆ ಒಂದಿಬ್ಬರು ಸದಸ್ಯರು ಗೈರಾಜರಾಗಿದ್ದರೆಂಬುದು ಇಲ್ಲಿ ಗಮನಾರ್ಹ ಅಂಶವಾಗಿದ್ದು, ವಿಶೇಷವಾಗಿ ಈ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೂ ಅಸಮ್ಮತಿ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಅಧ್ಯಕ್ಷ, ಉಪಾಧ್ಯಕ್ಷರಿಬ್ಬರು ಮಹಿಳೆಯರೇ ಅಗಿರುವುದರಿಂದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಪುರುಷ ಸದಸ್ಯರನ್ನು ಆದರಲ್ಲೂ ಹಿರಿಯ ಸದಸ್ಯರೊಬ್ಬರನ್ನು ಕೂರಿಸಲು ಸಭೆ ತೀರ್ಮಾನಕ್ಕೆ ಬಂದಿದೆಯಾದರೂ ಯಾರನ್ನೆಂಬುದು ಮಾತ್ರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಗೊತ್ತಾಗಿದೆ.

Purasabhe
ಕಾಂಗ್ರೇಸ್ ಸದಸ್ಯರಲ್ಲಿ ಸದಸ್ಯ ವಾಸು ಪೂಜಾರಿ, ರಾಮಕೃಷ್ಣ ಆಳ್ವ, ಸದಾಶಿವ ಬಂಗೇರ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್ರವರು ಪುರಸಭೆಗೆ ಎರಡನೇ ಬಾರಿಗೆ ಆಯ್ಕೆಗೊಂಡು ಹಿರಿಯ ಸದಸ್ಯರಾಗಿ ಗುರುತಿಸಿಕೊಂಡವರಾಗಿದ್ದಾರೆ. ಈ ಸದಸ್ಯರ ಪೈಕಿ ಯಾರು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗುತ್ತಾರೆಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಮೂಲಗಳ ಪ್ರಕಾರ ಸದಸ್ಯ ವಾಸುಪೂಜಾರಿ ಅಧ್ಯಕ್ಷ ಹುದ್ದೆಗೆ ಆಯ್ಕೆಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಬಂಟ್ವಾಳ ಕಾಂಗ್ರೇಸ್ಗೆ ಹೈಕಮಾಂಡ್ ಆಗಿರುವ ಸಚಿವ ರಮಾನಾಥ ರೈಯವರಿಂದ ಇದಕ್ಕೆ ಅಧಿಕ್ರತ ಮುದ್ರೆ ಬೀಳಬೇಕಾಗಿದೆ. !
ಹಾಗೆಯೇ ರಚನೆಗೊಳ್ಳಲಿರುವ ಒಂಭತ್ತು ಇಲ್ಲವೇ ಹನ್ನೊಂದು ಮಂದಿಯನ್ನೊಳಗೊಂಡ ಸ್ಥಾಯಿ ಸಮಿತಿಗೆ ವಿಪಕ್ಷ ಬಿ.ಜೆ.ಪಿ ಮತ್ತು ಪಿ.ಎಫ್ಐ ಸದಸ್ಯರ ಪೈಕಿ ಯಾರನ್ನು ಸೇರಿಸಿಕೊಳ್ಳುವುದೆಂಬ ಬಗ್ಗೆಯೂ ಚಚರ್ಿಸಲಾಗಿದ್ದು, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ. ಕೊನೆಗೆ ಸಚಿವ ರಮಾನಾಥ ರೈಯವರಿಂದ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ಸಭೆಯಲ್ಲಿ ನಿಶ್ಚಿಯಿಸಲಾಯಿತೆಂದು ಗೊತ್ತಾಗಿದೆ.
ಸ್ಥಾಯಿ ಸಮಿತಿ ವಿಳಂಬ ನಿಗೂಢ
ಸಾಮಾನ್ಯವಾಗಿ ನಗರಾಡಳಿತ ಸ್ಥಳೀಯ ಸಂಸ್ಥೆಯಲ್ಲಿ ಯಾವುದೇ ವಿಪಕ್ಷ ಅಧಿಕಾರಕ್ಕೆ ಬಂದ ಒಂದೆರಡು ಸಭೆಯಲ್ಲೇ ಸ್ಥಾಯಿ ಸಮಿತಿಯನ್ನು ರಚಿಸುವುದು ಸಾಮಾನ್ಯವಾಗಿದೆ. ಈ ಹಿಂದೆ ಬಂಟ್ವಾಳ ಪುರಸಭೆಯಲ್ಲೂ ಅಧಿಕಾರದಲ್ಲಿದ್ದ ಪಕ್ಷಗಳುಇದೇ ಸಂಪ್ರದಾಯವನ್ನು ಪಾಲಿಸಿತ್ತು.
ಆದರೆ ಆದ್ಯಾಕೋ ಚುನಾವಣೆ ಕಳೆದು ಸ್ಪಷ್ಟ ಬಹುಮತವಿದ್ದರೂ ಆಡಳಿತದ ಚುಕ್ಕಾಣಿ ಹಿಡಿದ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪರವರು ಮಾತ್ರ ಸ್ಥಾಯಿ ಸಮಿತಿ ರಚನೆಯ ಗೋಜಿಗೆ ಹೋಗದೆ ಹದಿನಾಲ್ಕು ತಿಂಗಳನ್ನೇ ಕಳೆದರು! ಈ ಸಂಗತಿ ಕಾಂಗ್ರೇಸ್ ಪಡಸಾಲೆಯಲ್ಲೂ ಚರ್ಚೆ , ಕುತೂಹಲಕ್ಕೂ ಕಾರಣವಾಗಿತ್ತು.
ಕಳೆದ ತಿಂಗಳು ಪುರಸಭಾಧ್ಯಕ್ಷೆ ತಮ್ಮ ಅಧಿಕಾರವಧಿಯಲ್ಲಿ 12 ತಿಂಗಳು ಪೂರೈಸಿದ ಹಿನ್ನಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ರಚನೆಯಲ್ಲಿ ವಿಳಂಬದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೂ ಗುಟ್ಟು ಬಿಟ್ಟು ಕೊಡದ ಪುರಸಭಾಧ್ಯಕ್ಷೆ ವಸಂತಿಯವರು ಈ ವಿಚಾರದಲ್ಲಿ ಸದಸ್ಯರೊಳಗೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂದು ಸ್ಪಷ್ಟಪಡಿಸಿ ಜಾರಿಕೊಂಡಿದ್ದರು.
ಇದೀಗ ಸದಸ್ಯರ ಒತ್ತಡಕ್ಕೆ ಕಟ್ಟುಬಿದ್ದೋ ಒಟ್ಟಾರೆ ಸ್ಥಾಯಿ ಸಮಿತಿ ರಚನೆಗೆ ಅಧ್ಯಕ್ಷೆ ವಸಂತಿ ಚಂದಪ್ಪರವರು ಮನಸ್ಸು ಮಾಡಿದ್ದಾರೆ, ಎಲ್ಲವೂ ಸರಿಯಾದರೆ ಹೊಸವರ್ಷಕ್ಕೆ ಪುರಸಭೆಯಲ್ಲಿ ಸ್ಥಾಯಿ ಸಮಿತಿ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ !
ವೆಂಕಟೇಶ್ ಬಂಟ್ವಾಳ.

By suddi9

Leave a Reply

Your email address will not be published. Required fields are marked *