ಸುದ್ದಿ9 ಬಂಟ್ವಾಳ ತಾಲ್ಲೂಕಿನ ನೇತ್ರಾವತಿ ಮತ್ತು ಫಲ್ಗುಣಿ ನದಿಯಿಂದ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಕಾಮಗಾರಿಗೆ ಸಂಬಂಧಿಸಿದಂತೆ ಇದೇ 13ರಂದು ಬೆಳಿಗ್ಗೆ ಸಂಗಬೆಟ್ಟು ಮತ್ತು ಮಧ್ಯಾಹ್ನ ಇಲ್ಲಿನ ಕುಡ್ತಮುಗೇರು ಎಂಬಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.
ಸಂಗಬೆಟ್ಟು ಸಮೀಪದ ಪುಚ್ಚಮೊಗರು ಫಲ್ಗುಣಿ ನದಿಯಿಂದ ಸ್ಥಳೀಯ ಸಂಗಬೆಟ್ಟು, ಕುಕ್ಕಿಪಾಡಿ, ರಾಯಿ, ಚೆನ್ನೈತ್ತೋಡಿ, ಪಂಜಿಕಲ್ಲು ಗ್ರಾಮಗಳು ಸಹಿತ ನೇತ್ರಾವತಿ ನದಿಯಿಂದ ಇಲ್ಲಿನ ಕರೋಪಾಡಿ, ಕನ್ಯಾನ, ವಿಟ್ಲಪಡ್ನೂರು ಹಾಗೂ ಕೊಳ್ನಾಡು ಗ್ರಾಮಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಕೆ ಯೋಜನೆ ಉದ್ದೇಶವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಲಿದ್ದು, ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ ಕಾರ್ಣಿಕ್, ಐವನ್ ಡಿಸೋಜ, ತಾ.ಪಂ.ಅಧ್ಯಕ್ಷ ಯಶವಂತ ಡಿ. ಮತ್ತಿತರ ಗಣ್ಯರು ಭಾಗವಹಿಸುವರು.