ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಪೇಟೆಗೆ ಸಮೀಪದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗಾಗಿ ಕಳೆದ 15 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಸುಸಜ್ಜಿತ ವಸತಿಗೃಹ ಕಳೆದ ಐದಾರು ವರ್ಷಗಳಿಂದ ಪಾಳು ಬಿದ್ದಿದೆ.
ಈ ಹಿಂದೆ ಸಿದ್ಧಕಟ್ಟೆ ಪೇಟೆಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂಬ ಸ್ಥಳೀಯರ ವ್ಯಾಪಕ ಬೇಡಿಕೆ ನಡುವೆಯೂ ‘ರಾಜಕೀಯ’ ಬಲದಿಂದ ರಾಯಿ ಗ್ರಾಮ ಪಂಚಾಯಿತಿ ಸಮೀಪದಲ್ಲಿರುವ ಎತ್ತರದ ಸರ್ಕಾರಿ ಗುಡ್ಡ ಪ್ರದೇಶದಲ್ಲಿ ಆರೋಗ್ಯ ಕೇಂದ್ರ ಆರಂಭಗೊಂಡಿತ್ತು. ಆರಂಭದಲ್ಲಿ ಇದೊಂದು ‘ಸರ್ಕಾರಿ ಬಂಗ್ಲೆ’ ಎಂಬ ಟೀಕೆಯೂ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು.

ಈ ಆಸ್ಪತ್ರೆಗೆ ಸಂಬಂಧಪಟ್ಟಂತೆ ಸ್ಥಳೀಯ ರಾಯಿ, ಕೊಯಿಲ, ಅರಳ, ಕುಕ್ಕಿಪಾಡಿ, ಸಿದ್ಧಕಟ್ಟೆ, ಸಂಗಬೆಟ್ಟು, ಕರ್ಪೆ ಮತ್ತಿತರ ಗ್ರಾಮಗಳಿಂದ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಯು ಭಾರೀ ಎತ್ತರದಲ್ಲಿರುವ ಪರಿಣಾಮ ರೋಗಿಗಳು ರಿಕ್ಷಾ ಬಾಡಿಗೆ ಮಾಡಿಕೊಂಡು ಬರುವುದು ಅನಿವಾರ್ಯವಾಗಿದೆ.
ಇನ್ನೊಂದೆಡೆ ರಾಯಿ-1, ಅರಳ-2, ಕರ್ಪೆ -1, ಎಲಿಯನಡುಗೋಡು-1 ಹೀಗೆ ಐದು ಉಪಕೇಂದ್ರಗಳು ಆರಂಭಗೊಂಡು ಇಲ್ಲಿಯೂ ಸಹಾಯಕ ಶುಶ್ರೂಷಕಿಯರ ಕೊರತೆ ಕಂಡು ಬಂದಿದೆ.
ಇಲ್ಲಿನ ನಾಗರಿಕರಿಗೆ ರಾತ್ರಿ ವೇಳೆ ಅನಾರೋಗ್ಯ ಕಾಣಿಸಿಕೊಂಡಾಗ ತಕ್ಷಣವೇ ಸರ್ಕಾರಿ ವೈದ್ಯರು ಸಿಗಬೇಕು ಎಂಬ ನೆಲೆಯಲ್ಲಿ ಸರ್ಕಾರವು ಕಳೆದ 15ವರ್ಷಗಳ ಹಿಂದೆ ನಿರ್ಮಿಸಿಕೊಟ್ಟ ಸುಸಜ್ಜಿತ ವಸತಿಗೃಹ ಕಳೆದ ಐದಾರು ವರ್ಷಗಳಿಂದ ನಿರುಪಯುಕ್ತಗೊಂಡು ಪಾಳು ಬಿದ್ದಿದೆ. ಸುತ್ತಲೂ ಹುಲ್ಲು ಗಿಡಗಂಟಿಗಳು ಬೆಳೆದು ನಿಂತು ವಸತಿಗೃಹವೇ ಕಾಣದಂತಾಗಿದ್ದು, ಆವರಣಗೋಡೆಗೆ ಅಳವಡಿಸಲಾಗಿರುವ ಗೇಟ್ ತುಕ್ಕು ಹಿಡಿದು ಕಳಚಿ ಬಿದ್ದಿದೆ.
ರಾತ್ರಿ ವೇಳೆ ಇದೊಂದು ಕಿಡಿಗೇಡಿಗಳ ಅನೈತಿಕ ತಾಣವಾಗಿ ಪರಿವರ್ತನೆಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಈ ಹಿಂದೆ ವೈದ್ಯಾಧಿಕಾರಿಯಾಗಿದ್ದ ಡಾ.ರಾಜೇಶ ಶೆಟ್ಟಿ ಎಂಬವರು ಸುಮಾರು ಒಂದೂವರೆ ವರ್ಷ ವಸತಿಗೃಹ ಉಪಯೋಗಿಸಿಕೊಂಡು ಬಳಿಕ ಮೂಡುಬಿದ್ರೆಗೆ ಸ್ಥಳಾಂತರಗೊಂಡಿದ್ದರು. ಆ ಬಳಿಕ ಈ ವಸತಿಗೃಹ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ರಕ್ಷಾ ಸಮಿತಿಯಿಂದಲೂ ಕಡೆಗಣಿಸಲ್ಪಟ್ಟಿದೆ.
ಕಳೆದ ಒಂದು ವರ್ಷ ಡಾ.ಬುಷ್ರಾ ತರಬೇತು ಹಂತದ ವೈದ್ಯರಾಗಿ (ಪ್ರೊಬೆಶನರಿ) ಸೇವೆ ಸಲ್ಲಿಸಿ ನಿರ್ಗಮಿಸಿದ್ದು, ಇದೀಗ ಮತ್ತೆ ಇದೇ ಹಂತದಲ್ಲಿ ಡಾ.ಶ್ವೇತಾ ಬಂದು ಹೋಗುತ್ತಿದ್ದಾರೆ.
ಪ್ರಸಕ್ತ ಆಡಳಿತ ವೈದ್ಯಾಧಿಕಾರಿಯಾಗಿ ಪಂಜಿಕಲ್ಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರಾಮ್ ರಾಜೇಶ್ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆಡಳಿತ ವೈದ್ಯಾಧಿಕಾರಿ, ಫಾರ್ಮಸಿಸ್ಟ್, ಪ್ರಥಮ ದರ್ಜೆ ಸಹಾಯಕ, ಸಹಾಯಕ ಶುಶ್ರೂಷಕಿ ಮತ್ತು ಇಬ್ಬರು ಪುರುಷ ಸಹಾಯಕ ಶುಶ್ರೂಷಕ ಹುದ್ದೆ ಖಾಲಿಯಾಗಿಯೇ ಉಳಿದಿದೆ. ಇದರಿಂದಾಗಿ ಪ್ರಸಕ್ತ ಪ್ರಯೋಗಾಲಯ ತಜ್ಞ ಬಸವರಾಜ್ ಮತ್ತಿತರ ಶುಶ್ರೂಷಕಿಯರು ಸೇರಿಕೊಂಡು ಆಸ್ಪತ್ರೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಯನ್ನು ನಿಭಾಯಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂಬುದು ಸ್ಥಳೀಯರ ವಾದ.
ಒಟ್ಟಿನಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ತವರು ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಎದುರಾದರೆ ರಾಜ್ಯದೆಲ್ಲೆಡೆ ಅದ್ಯಾವ ಸ್ಥಿತಿ ಬಂದಿರಬಹುದು ಎಂಬ ಪ್ರಶ್ನೆ ಇಲ್ಲಿನ ನಾಗರಿಕರನ್ನು ಕಾಡುತ್ತಿದೆ.
-ಮೋಹನ್ ಕೆ.ಶ್ರೀಯಾನ್