ಸುದ್ದಿ9 ಬಂಟ್ವಾಳ: ಭಾಷಾಂತರದ ಪ್ರಕ್ರಿಯೆಯ ಭರದಲ್ಲಿ ಕೃತಿಯ ಹಿಂದಿನ ಭಾವ, ಅನುಭವ, ಸನ್ನಿವೇಶಗಳು ಮಹತ್ವ ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಹಾಗೂ ಎಸ್.ವಿ.ಎಸ್. ಕಾಲೇಜು ಬಂಟ್ವಾಳ ಇದರ ಆಶ್ರಯದಲ್ಲಿ ಮಂಗಳವಾರ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಆರಂಭಗೊಂಡ ಮೂರು ದಿನಗಳ ಭಾಷಾಂತರ ಪರಿಚಯಾತ್ಮಕ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕೃತಿಯ ಸಾರವನ್ನು ಅರಿತು ಮಾಡುವ ಭಾಷಾಂತರ ಹೆಚ್ಚು ಸೃಜನಶೀಲತೆಯಿಂದ ಕೂಡಿರುತ್ತದೆ ಎಂದು ಅಭಿಪ್ರಾಯಿಸಿದ ಅವರು, ರಷ್ಯನ್ ಕೃತಿಗಳು ಭಾರತದ 18 ಭಾಷೆಗಳು ಸೇರಿದಂತೆ ವಿಶ್ವದ ನಾನಾ ಭಾಷೆಗಳಿಗೆ ಭಾಷಾಂತರಗೊಂಡಿದೆ. ಈ ನಿಟ್ಟಿನಲ್ಲಿ ಭಾರತವೂ ರಷ್ಯನ್ ಮಾದರಿಯಲ್ಲಿ ಮುನ್ನಡೆಯುತ್ತಿದ್ದು, ವಿಶ್ವವಿದ್ಯಾನಿಲಯಗಳು ಈ ನಿಟ್ಟಿನಲ್ಲಿ ಹೆಚ್ಚು ಶ್ರಮವಹಿಸಬೇಕು ಎಂದರು. ಮಂಗಳೂರು ವಿ.ವಿ.ವ್ಯಾಪ್ತಿಯಲ್ಲಿ ಹಂಪಿ ವಿ.ವಿ.ಯ ನೇತೃತ್ವದಲ್ಲಿ ಕಮ್ಮಟ ಆಯೋಜಿಸಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
kammata

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತಕುಮಾರ ಆಶಯ ಭಾಷಣಮಾಡಿದರು. ಭಾಷಾಂತರ ಎನ್ನುವುದು ಸಂವಹನ ಕ್ಕೊಂದು ಮಾಧ್ಯಮ. ಭಾಷಾ ಅಧ್ಯಯನ ಶಿಸ್ತಿಗೆ ಒಳಪಟ್ಟಾಗ ಮಾತ್ರ ಇದು ಸುಲಲಿತವಾಗುತ್ತದೆ ಎಂದವರು ಅಭಿಪ್ರಾಯಿಸಿದರು.  ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾನಿಕಾಯದ ಡೀನ್ ಡಾ. ಡಿ. ಪಾಂಡುರಂಗ ಬಾಬು ಹಾಗೂ ಎಸ್.ವಿ.ಎಸ್. ಕಾಲೇಜಿನ ಸಂಚಾಲಕರಾದ ಕೂಡಿಗೆ ಪ್ರಕಾಶ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಮ್ಮಟದ ನಿರ್ದೇಶಕರಾದ ಡಾ.ಎ.ಮೋಹನ ಕುಂಟಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವಿ.ಎಸ್.ಕಾಲೇಜಿನ ಪ್ರಾಂಶುಪಾಲರಾದ ಡಾ.ಪಾಂಡುರಂಗನಾಯಕ್ ಸ್ವಾಗತಿಸಿ, ಕಮ್ಮಟದ ಸಂಚಾಲಕಿ ಡಾ.ನಾಗವೇಣಿ ಮಂಚಿ ವಂದಿಸಿದರು. ಉಪನ್ಯಾಸಕ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ 60 ಮಂದಿ ವಿದ್ಯಾರ್ಥಿಗಳು ಕಮ್ಮಟದಲ್ಲಿ ಪಾಲ್ಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *