ಸುದ್ದಿ9 ಮಂಗಳೂರು: ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ 80 ಪೈಸೆಯಷ್ಟು ಹೆಚ್ಚಿಸಬೇಕೆಂಬ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ಪ್ರಸ್ತಾವಕ್ಕೆ ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಎಂ.ಆರ್‌.ಶ್ರೀನಿವಾಸ ಮೂರ್ತಿ ನೇತೃತ್ವದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್‌ ದರ ಪರಿಷ್ಕರಣೆ ಕುರಿತು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾರ್ವ­ಜನಿಕ ವಿಚಾರಣೆಯಲ್ಲಿ, ರೈತರು, ಕೈಗಾರಿಕಾ ಸಂಘಟನೆಗಳು ಮತ್ತಿತರ ಬಳಕೆದಾರರು ವಿದ್ಯುತ್‌ ದರ ಹೆಚ್ಚಳಕ್ಕೆ ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 11.93) ವಿದ್ಯುತ್‌ ವಿತರಣಾ ವ್ಯವಸ್ಥೆಯ ಸೋರಿಕೆ ಕಡಿಮೆ (ಶೇ 9.45) ಆಗಿದೆ. ಆದರೆ, ಪ್ರತಿ ಯೂನಿಟ್‌ ವಿದ್ಯುತ್‌ ಖರೀದಿಗೆ ಮೆಸ್ಕಾಂ ಪಾವತಿಸುವ ದರವು ರೂ 5.47ರಿಂದ ರೂ 5.91ಕ್ಕೆ ಹೆಚ್ಚಳವಾಗಿದೆ. ಶಿವಮೊಗ್ಗ, ಶಂಕರನಾರಾ­ಯಣ, ಕೋಟ, ಸುಬ್ರಹ್ಮಣ್ಯ ಹಾಗೂ ಶೃಂಗೇರಿಯಲ್ಲಿ ಹೊಸ ಉಪವಿಭಾಗಗಳನ್ನು ಆರಂಭಿಸುವ ಯೋಜನೆ­ಯನ್ನು ಮೆಸ್ಕಾಂ ಹೊಂದಿದೆ. ಕಂಪೆನಿಯಲ್ಲಿ ಶೇ 55ರಷ್ಟು ಹುದ್ದೆಗಳು ಖಾಲಿ ಇವೆ. ಹಾಗಾಗಿ ಯೂನಿಟ್‌ಗೆ 80 ಪೈಸೆಯಷ್ಟು ಹೆಚ್ಚಳ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಕೋರಿದರು.

10Mng-1
ಏಕರೀತಿಯ ದರ ಬೇಡ: ‘ಆಯೋಗವು ರಾಜ್ಯವ್ಯಾಪಿ ಏಕರೀತಿಯ ದರ ನಿಗದಿಗೊಳಿಸುವ ಬದಲು, ಆಯಾ ವಿದ್ಯುತ್‌ ಸರಬರಾಜು ಕಂಪೆನಿಯ ಲಾಭ ನಷ್ಟಕ್ಕೆ ಅನುಗುಣವಾಗಿ ದರ ನಿಗದಿಪಡಿಸಬೇಕು. ದಕ್ಷವಾಗಿ ನಿರ್ವಹಿಸುವ ಕಂಪೆನಿಗೆ ಉತ್ತೇಜನ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ಮಂಜುಗಡ್ಡೆ ಸ್ಥಾವರಗಳಿಗೆ ಕೇರಳ ಹಾಗೂ ಗೋವಾದಲ್ಲಿ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಸಲಾಗುತ್ತಿದೆ. ಇಲ್ಲಿಂದ ಮೀನು ಕೊಂಡೊ­ಯ್ಯುವ ಲಾರಿಗಳು ಅಲ್ಲಿಂದಲೇ ಮಂಜುಗಡ್ಡೆಯನ್ನು ತರುತ್ತಿವೆ. ರಾಜ್ಯದ ಅನೇಕ ಮಂಜುಗಡ್ಡೆ ಘಟಕಗಳು ಮುಚ್ಚಿವೆ. ಈ ಘಟಕಗಳು ಮಳೆಗಾಲದಲ್ಲಿ ಮೂರು ತಿಂಗಳು ಮುಚ್ಚುತ್ತವೆ. ಯೂನಿಟ್‌ಗೆ 80 ಪೈಸೆ ಹೆಚ್ಚಿಸಿದರೆ, ನಮಗೆ ಮಾಸಿಕ 24 ಸಾವಿರ ಹೊರೆ ಬೀಳಲಿದೆ’ ಎಂದು ಮಂಜುಗಡ್ಡೆ ಘಟಕಗಳ ಸಂಘಟನೆಯ ದೇವದಾಸ್‌ ಬೇಡಿಕೆ ಸಲ್ಲಿಸಿದರು.

ತೀರ್ಥಹಳ್ಳಿಯ ನೀರಾವರಿ ಪಂಪ್‌ಸೆಟ್‌ ಬಳಕೆದಾರರ ಸಂಘದ ಅಧ್ಯಕ್ಷ ನರಸಿಂಹ ನಾಯಕ್‌ ಮಾತನಾಡಿ, ‘ಮೆಸ್ಕಾಂ ಪ್ರತಿ ಆಟೋ ರಿಕ್ಲೋಸರ್‌ಗಳ ಅಳವಡಿಕೆಗೆ ರೂ 50 ಲಕ್ಷ ಖರ್ಚು ಮಾಡಿದೆ. ಐದಕ್ಕೂ ಅಧಿಕ ಯಂತ್ರಗಳು ಹದಗೆಟ್ಟಿವೆ. ಇದರ ಹೊಣೆಯನ್ನು ಗ್ರಾಹಕರ ತಲೆಗೆ ಕಟ್ಟುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ­ಯನ್ನೂ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಅವರು ದೂರಿದರು.

ಭಾರತೀಯ ಕಿಸಾನ್‌ ಸಂಘದ ಸತ್ಯನಾರಾಯಣ ಉಡುಪ ಮಾತನಾಡಿ, ‘ವಿದ್ಯುತ್‌ ದರ ಹೆಚ್ಚಳ ಮಾಡದಂತೆ ನಮ್ಮ ಸಂಘಟನೆಯಿಂದ 1600 ಅರ್ಜಿಗಳನ್ನು ಸಲ್ಲಿಸಿದ್ದೇವೆ. ಯುಪಿಸಿಎಲ್‌ಗೆ ಜಾಗ ಕೊಟ್ಟ­ವರು ಮೆಸ್ಕಾಂ ವ್ಯಾಪ್ತಿಯ ಜನತೆ. ಯುಪಿಸಿ­ಎಲ್‌ನಿಂದ ಮೆಸ್ಕಾಂಗೆ ಪೂರೈಕೆ ಆಗಬೇಕಾದಷ್ಟು ವಿದ್ಯುತ್‌ ಸಿಗುತ್ತಿದೆಯೇ’ ಎಂದು ಅವರು ಪ್ರಶ್ನಿಸಿದರು.
ರೈತರು ಹೆಚ್ಚುವರಿ ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್‌ ಪಡೆಯಲು ರೂ 10 ಸಾವಿರ ಅರ್ಜಿ ಶುಲ್ಕ ಸಲ್ಲಿಬೇಕಾಗಿರುವ ಬಗ್ಗೆ ಉಡುಪಿ ಜಿಲ್ಲಾ ಕೃಷಿಕರ ಸಂಘದ ರಾಮಕೃಷ್ಣ ಶರ್ಮ ಹಾಗೂ ಇತರ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶ­ದಲ್ಲಿ ಲೋ–ವೋಲ್ಟೇಜ್‌ ಸಮಸ್ಯೆ ನಿವಾರಿಸುವಂತೆ ಕೃಷಿಕ ಕುದಿ ಶ್ರೀನಿವಾಸ ಭಟ್‌ ಒತ್ತಾಯಿಸಿದರು.
ಎಲ್ಲಾ ಕಚೇರಿಗಳಲ್ಲೂ ಯಾವ ಸೇವೆಯನ್ನು ಎಷ್ಟು ದಿನಗಳ ಒಳಗೆ ಪೂರೈಸಲಾಗುತ್ತದೆ ಎಂಬುದನ್ನು ಪ್ರದರ್ಶಿಸಬೇಕು. ಸಕಾಲದಲ್ಲಿ ಸೇವೆ ಒದಗಿಸದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ವಿದ್ಯುತ್‌ ಪರಿವರ್ತಕ ಹದಗೆಡುವುದರಿಂದ ಸೇವೆಯಲ್ಲಿ ಲೋಪ ಆಗುವುದನ್ನು ತಡೆಯಲು ಹೆಚ್ಚುವರಿ ವಿದ್ಯುತ್‌ ಪರಿವರ್ತಕಗಳನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು ಎಂದು ಕೆಇಆರ್‌ಸಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಸೂಚಿಸಿದರು.

By suddi9

Leave a Reply

Your email address will not be published. Required fields are marked *