ನವದೆಹಲಿ: 194 ಪ್ರಯಾಣಿಕರು ಹಾಗೂ ಏಳು ಸಿಬ್ಬಂದಿಯನ್ನು ಹೊತ್ತು ಮಂಗಳೂರಿನಿಂದ ಮುಂಬೈ ಮಾರ್ಗವಾಗಿ ನವದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬೈ ಏರ್ಪೋರ್ಟ್ನಲ್ಲಿ ಸ್ವಲ್ಪದರಲ್ಲೇ ಭಾರಿ ಅನಾಹುತವೊಂದರಿಂದ ಪಾರಾಗಿರುವ ಘಟನೆ ನಡೆದಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ಏರ್ ಇಂಡಿಯಾ ವಿಮಾನದ ಹಿಂಭಾಗ (ಬಾಲ) ನೆಲಕ್ಕೆ ಉಜ್ಜಿಕೊಂಡು ಹೋಗಿದೆ. ಆದರೆ ಈ ವೇಳೆ ಯಾವುದೇ ಅಪಾಯವಾಗಿಲ್ಲ. ಕಳೆದ ಭಾನುವಾರ ನಡೆದ ಈ ಘಟನೆಯನ್ನು ಏರ್ ಇಂಡಿಯಾ ವಕ್ತಾರರು ಕೂಡ ಖಚಿತಪಡಿಸಿದ್ದಾರೆ.
ಅಂದು ವಿಮಾನದಲ್ಲಿದ್ದ ಸಿಬ್ಬಂದಿಯನ್ನು ರಜೆ ಮೇಲೆ ಕಳುಹಿಸಲಾಗಿದೆ. ಅವಘಡಕ್ಕೀಡಾದ ಏರ್ಬಸ್ 321 ವಿಮಾನವನ್ನು ಈಗ ಸೇವೆಯಿಂದ ಹಿಂಪಡೆಯಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ಘಟನೆ ಕುರಿತು ತನಿಖೆ ಆರಂಭಿಸಿದೆ. ಏರ್ ಇಂಡಿಯಾ ಕೂಡ ಆಂತರಿಕ ತನಿಖೆ ನಡೆಸುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.
