ಸುದ್ದಿ9 ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್‍ನ 2014-15ನೇ ಸಾಲಿನ ಗ್ರಾಮಸಭೆ ನೀರಿನ ಸಮಸ್ಯೆ ಬಗೆಹರಿಸದ ಹೊರತು ಗ್ರಾಮಸಭೆ ನಡೆಸದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಬುಧವಾರ ನಡೆಯಬೇಕಾಗಿದ್ದ ಗ್ರಾಮಸಭೆಯು ರದ್ದುಗೊಂಡಿದೆ.


ಗ್ರಾಮಸಭೆ ನಡೆಯಬೇಕಾಗಿದ್ದ ಸ್ಥಳೀಯ ಖಾಸಗಿ ಸಭಾಂಗಣಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಇರ್ಫಾನ್ ಹಾಗೂ ನೋಡಲ್ ಅಧಿಕಾರಿ ಸಹಿತ ಆಗಮಿಸುತ್ತಿರುವಾಗಲೇ, ಗ್ರಾಮಸ್ಥರು ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿ ತಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸಿ ನಂತರ ಗ್ರಾಮಸಭೆ ನಡೆಸಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿ ಶ್ಯಾಮಲ, ಇವರು ಗ್ರಾಮಸಭೆ ರದ್ದುಗೊಂಡಿದೆ ಎಂದು ಪ್ರಕಟಿಸಿದರು.
ಗ್ರಾಮಸ್ಥರ ಪ್ರಮುಖ ಬೇಡಿಕೆಗಳು
ಎರಡು ದಿನಕ್ಕೊಮ್ಮೆ ಅರ್ಧಗಂಟೆಯಷ್ಟು ನೀರು ಸರಬರಾಜು ಮಾಡುತ್ತಿದ್ದು ಇದಕ್ಕೆ ಮೀಟರ್ ಅಳವಡಿಸಲಾಗಿದೆ. ಅರ್ಧ ಗಂಟೆ ನೀರಿಗೆ ಮೀಟರ್ ಅಳವಡಿಸಿರುವುದು ಯಾಕೆ?
ಪ್ರಸ್ತುತ ಪಡುಪೆರಾರದಲ್ಲಿ ಎರಡು ನೀರಿನ ಟ್ಯಾಂಕ್ ಇದೆ. ಒಂದು ಪಡೀಲ್ ಹಾಗೂ ಈಶ್ವರ ಕಟ್ಟೆಯಲ್ಲಿದೆ. ಇದರಿಂದ ನೀರು ಪೂರೈಕೆ ಸಾಕಾಗುವುದಿಲ್ಲ. ಅದಕ್ಕಾಗಿ ನೀರಿನ ಟ್ಯಾಂಕ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
ನೀರಿನ ಸಮಸ್ಯೆ ತಲೆದೋರಿದೆ. ಸದ್ಯ ಇರುವ ಕೊಳವೆ ಬಾವಿ ನೀರಿನಿಂದ ಕಲುಷಿತ ನೀರು ಬರುತ್ತಿದೆ. ಅದಕ್ಕಾಗಿ ಹೊಸತಾದ ಕೊಳವೆಬಾವಿ ತೋಡಬೇಕು.
ಪಂಚಾಯತ್ ಸಮೀಪದ ಪಡುಪೆರಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಳೆದ ಗ್ರಾಮಸಭೆಯಲ್ಲಿ ಪಂಚಾಯತ್‍ಗೆ ತಿಳಿಸಲಾಗಿದ್ದರೂ ಶಾಲೆಯಲ್ಲಿ ನೀರಿನ ಸಮಸ್ಯೆ ಇನ್ನೂ ಹಾಗೆಯೇ ಇದೆ. ಈ ಬಗ್ಗೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸಾರ್ವಜನಿಕರ ಜೊತೆಯಾಗಿ ಬಂದು ಪಂಚಾಯತ್‍ಗೆ ಮನವಿ ಸಲ್ಲಿಸಿದ್ದರು. ಆಗ ಪಂಚಾಯತ್ ಅಧ್ಕಕ್ಷರು ನೀರಿನ ಸಮಸ್ಯೆ ಬಗೆಹರಿಸಲಾಗುವುದಲ್ಲದೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಸಭೆಯ ಸಂಧರ್ಭ ಗ್ರಾಮಸ್ಥರು ಕಲುಷಿತ ನೀರನ್ನು ಬಾಟ್ಲಿಯಲ್ಲಿ ತಂದು ಪ್ರದರ್ಶನ ನಡೆಸಿದರು. ಕೆಲವರು ನಳ್ಳಿನೀರನ್ನು ತೆಂಗಿನ ಮರಕ್ಕೆ ಬಿಡುವುದನ್ನು ಫೋಟೋ ಸಮೇತ ಪಿಡಿಓ ಪ್ರದರ್ಶಿಸಿದರು.
ಗ್ರಾಮಸಭೆಯಲ್ಲಿ ಗೊಂದಲ ಉಂಟಾಗುತ್ತಿದ್ದುಈ ಮಧ್ಯೆ ಪಡುಪೆರಾರ ಶಾಲೆಯ ಮಕ್ಕಳು ರಿಕ್ಷಾದಲ್ಲಿ ದೂರದೂರಿನಿಂದ ನೀರನ್ನು ತರುವುದಕ್ಕೆ ಪರದಾಟ ನಡೆಸುತ್ತಿರುವುದು ಕಂಡುಬಂದಿತು. ಆದರೆ ಈ ದೃಶ್ಯ ಪಂಚಾಯತ್ ಅಧ್ಯಕ್ಷರಿಗಾಗಲೀ, ಅಧಿಕಾರಿಗಳಿಗಾಗಲೀ ಪರಿಣಾಮ ಉಂಟು ಮಾಡದಿರುವುದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.
ಬಳಿಕ ಗ್ರಾಮಸ್ಥರು ಬಂದಿರುವ ಕೆಲವು ಅಧಿಕಾರಿಗಳು ಪಂಚಾಯತ್‍ನ ಕಚೇರಿಗೆ ಆಗಮಿಸಿದಾಗ ಗ್ರಾಮಸ್ಥರು ತಮ್ಮ ಬೇಡಿಕೆಯನ್ನು ಮುಂದಿಟ್ಟು ಪಂಚಾಯತ್ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡು ಈ ಸಂದರ್ಭದಲ್ಲಿ ಪರಸ್ಪರ ಆಕ್ರೋಶಭರಿತ ಮಾತಿನ ಚಕಮಕಿ ನಡೆಯಿತು. ಜನರ ಬೇಡಿಕೆ ಆಲಿಸಿದ ಬಳಿಕ ಗ್ರಾಮಸ್ಥರ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡಲಾಯಿತು.
ಗ್ರಾಮಸಭೆಯಲ್ಲಿ ಜಿ.ಪಂ ಸದ್ಯರಾದ ಜನಾರ್ದನ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪಂ ಅಧ್ಯಕ್ಷರಾದ್ ಬಿ.ಎಂ ಇರ್ಫಾನ್, ಪಂ. ಉಪಾಧ್ಯಕ್ಷೆ ಶಾಂತ ಎಂ., ಪಿಡಿಓ ದಿನೇಶ್ ಎಂ, ಅರಣ್ಯಾಧಿಕಾರಿ, ಕಂದಾಯ ಅಧಿಕಾರಿ ಹಾಗೂ ಅರಣ್ಯಾಧಿಕಾರಿ ಉಪಸ್ಥಿತರಿದ್ದರು.


