ಅಯೋಧ್ಯೆ: ಶಿವ ದೇವರು ಮುಸ್ಲಿಮರ ಮೊದಲ ಪ್ರವಾದಿ, ಮುಸ್ಲಿಂ ಜನಾಂಗದವರೆಲ್ಲರೂ ಒಂದು ಕಾಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಎಂದು ಜಮೇತ್ ಉಲೇಮಾದ ಮುಫ್ತಿ ಮುಹಮ್ಮದ್ ಇಲಿಯಾಸ್ ನೀಡಿರುವ ಹೇಳಿಕೆಯಿಂದ ವಿವಾದ ಭುಗಿಲೆದ್ದಿದೆ.
ಫೆಬ್ರವರಿ 27ರಂದು ಕೋಮುಸೌಹಾರ್ದ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಹಿಂದೂ ಸಾಧು ಸಂತರನ್ನ ಆಹ್ವಾನಿಸಲು ಆಗಮಿಸಿದ್ದ ಮುಸ್ಲಿಮ್ ಧರ್ಮಗುರುಗಳು, ಶಿವ ಮತ್ತು ಪಾರ್ವತಿಯರು ತಮ್ಮೆಲ್ಲರ ಸೃಷ್ಟಿಕರ್ತರೂ ಹೌದು ಎಂದು ಅಭಿಪ್ರಾಯಪಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. “ಭಾರತವನ್ನು ಹಿಂದೂ ರಾಷ್ಟ್ರವೆಂದು ಕರೆಯಲು ನಮಗೆ ಯಾವುದೇ ವಿರೋಧವಿಲ್ಲ. ಚೀನಾ ಮತ್ತು ಜಪಾನ್’ನಲ್ಲಿರುವ ಜನರನ್ನ ಚೀನೀಯರು ಹಾಗೂ ಜಪಾನೀಯರು ಎಂದು ಹೇಗೆ ಸಂಬೋಧಿಸುತ್ತೇವೋ, ಹಾಗೆ ಭಾರತದಲ್ಲಿರುವವರನ್ನ ಹಿಂದೂಸ್ಥಾನೀ ಎಂದು ಕರೆಯಬಹುದು…” ಎಂದು ಜಮೇತ್ ಉಲೇಮಾ ಅವರು ನುಡಿದಿದ್ದಾರೆ. ಉತ್ತರಪ್ರದೇಶದ ಬಲರಾಮಪುರದಲ್ಲಿ ಫೆ.27ರಂದು ಈ ಕೋಮುಸೌಹಾರ್ದ ಸಮಾವೇಶ ನಡೆಯಲಿದೆ. ಅಲ್ಲಿ ಎಲ್ಲಾ ಧರ್ಮಗಳ ಪ್ರತಿನಿಧಿಗಳು ಪಾಲ್ಗೊಂಡು ಕೋಮುಸೌಹಾರ್ದ ಸಂದೇಶ ಸಾರುವ ನಿರೀಕ್ಷೆ ಇದೆ.
