ಬಂಟ್ವಾಳ: ಶ್ರೀ ವೆಂಕಟ್ರಮರಣ ವಿದ್ಯಾಕೇಂದ್ರಗಳ ಬಳಿ ಸ್ಥಾಪಿಸಲು ಉದ್ದೇಶಿಸಲಾದ ಮೊಬೈಲ್ ಟವರ್‍ಗೆ ಆಕ್ಷೇಪಿಸಿ ಇಂದು ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗ ಸಾರ್ವಜನಿಕ ಪ್ರತಿಭಟನೆ ತಾಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಸಾರ್ವಜನಿಕ ಪ್ರತಿಭಟನೆ ನಡೆಯಿತು. ಬಿ.ಸಿ.ರೋಡ್ ಸರ್ಕಲ್‍ದಿಂದ ತಾಲೂಕು ಕಚೇರಿ ತನಕ ಟವರ್ ಕುರಿತು ತಾಲೂಕಿನ ನಾನಾ ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
1

2

3

4

ಶಾಲಾ-ಕಾಲೇಜು ಆಸುಪಾಸಿನಲ್ಲಿ ಮೊಬೈಲ್ ಟವರ್ ನಿರ್ಮಿಸಬಾರದೆಂಬ ಮಾರ್ಗಸೂಚನೆ ಇದ್ದರೂ, ಟವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯ, ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿಯವರ ಕಚೇರಿಗಳಿಗೆ ಲಿಖಿತ ಆಕ್ಷೇಪ ನೀಡಲಾಗಿದ್ದು, ಯಾವುದೇ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ.
ಉದ್ದೇಶಿತ ಟವರ್ ನಿರ್ಮಾಣದ ಸ್ಥಳದಲ್ಲೇ ಈಗಾಗಲೇ ಒಂದು ಟವರ್ ಕಾರ್ಯವೆಸಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಟವರ್ ಆಸುಪಾಸಿನ ಮಕ್ಕಳು ವಿಕಿರಣದ ಪ್ರಭಾವದಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಸಮಿತಿಯ ಮುಂದಾಳು ಬಿ.ಎಂ. ಪ್ರಭಾಕರ ದೈವಗುಡ್ಡೆ ತಿಳಿಸಿದ್ದಾರೆ. ಟವರ್ ನಿರ್ಮಾಣಕ್ಕೆ ಆಕ್ಷೇಪಿಸಿ ಸ್ಥಳೀಯ ನಿವಾಸಿ ರಿಚರ್ಡ್ ಡಿಸೋಜ ಅಧಿಕಾರಿಗಳಿಗೆ ದೂರು ನೀಡಿದ್ದರು.
ಈ ದೂರಿನ್ವಯ ಬೆಂಗಳೂರಿನ ಇಂಡಸ್ ಟವರ್ ಲಿಮಿಟೆಡ್ ಕಾನೂನು ವಿಭಾಗದ ಮುಖ್ಯಸ್ಥ ಶ್ರೀನಾಥ್ ಎಂ.ಎಸ್.ಎಂಬವರಿಗೆ ನೊಟೀಸ್ ಜಾರಿಗೊಳಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಅವರು, ಅನುಮತಿ ಇಲ್ಲದೇ ಕಾಮಗಾರಿಯನ್ನು ಕೈಗೊಂಡಿರುವ ಬಗ್ಗೆ ಸದಸ್ಯರಿಂದ ವಿರೋಧ ವ್ಯಕ್ತವಾಗಿದ್ದು, ಕಾನೂನು ಕ್ರಮ ಕೈಗೊಳ್ಳಲು ಕಂದಾಯ ಹಾಗೂ ಸಂಬಂಧಿತ ಇಲಾಖಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಕ್ರಮ ಕಾಮಗಾರಿ ಬಗ್ಗೆ ನಗರ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಬಬಿತಾ ಕೋಟ್ಯಾನ್ ತಿಳಿಸಿದ್ದಾರೆ. ತಾಲೂಕಿನ ಕಾಲೇಜು ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಕಾರು, ವ್ಯಾನ್, ಆಟೋರಿಕ್ಷಾ ಚಾಲಕರು, ಮಾಹಿತಿ ಹಕ್ಕುಕಾರ್ಯಕರ್ತರು ಜಾಗೃತಿಯಲ್ಲಿ ಭಾಗವಹಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ: ಟವರ್ ಕಾಮಗಾರಿಯನ್ನು ಸ್ಥಗಿತಗೊಳಿಸುವ ವಿಚಾರದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಯವರು ನಿರ್ಲಕ್ಷ್ಯ ವಹಿಸಿರುವುದಾಗಿ ಸಮಿತಿ ಸದಸ್ಯರು ಆರೋಪಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಹಾಗೂ ಮೊಬೆಲ್ ಟವರ್‍ಗಳಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಪ್ರತಿಭಟನೆ ಎಂದರು. ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ದೇವದಾಸ್ ಶೆಟ್ಟಿ, ಸದಾಶಿವ ಬಂಗೇರ, ರಾಮ್‍ದಾಸ್ ಬಂಟ್ವಾಳ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

By suddi9

Leave a Reply

Your email address will not be published. Required fields are marked *