ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ (ರಿ) ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಬಂಟ್ವಾಳ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಬಂಟ್ವಾಳ ಹಾಗೂ ಭಾರತ ಸರಕಾರದ ಸಮುದಾಯ ಪೋಷಣಾ ಮತ್ತು ವಿಸ್ತರಣಾ ಘಟಕ ಇದರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬಂಟ್ವಾಳ ಸ್ತ್ರೀಶಕ್ತಿ ಭವನದಲ್ಲಿ ನಡೆದ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಜಯಪ್ರಕಾಶ್ ಡಿ.ಆರ್ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ವಹಿಸಿದ್ದರು. ವಕೀಲರಾದ ಆಶಾಮಣಿ ಡಿ.ರೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಂಟ್ವಾಳ ಸಹಾಯಕ ಸರಕಾರಿ ಅಭಿಯೋಜಕರಾದ ಅರ್ಚನಾ ಪ್ರಸಾದ್, ತಾ.ಪಂ. ಉಪಾಧ್ಯಕ್ಷೆ ವಿಲಾಸಿನಿ, ಮಂಗಳೂರು ಸಮುದಾಯ ಪೋಷಣಾ ಮತ್ತು ವಿಸ್ತರಣಾ ಘಟಕದ ಪ್ರಾತ್ಯಕ್ಷಿಕ ಅಧಿಕಾರಿ ಶಿವದರ್ಶನ ತ್ರಿಪಾಠಿ, ಬಂಟ್ವಾಳ ಸಿಡಿಪಿಒ ಮಲ್ಲಿಕಾ ಜೋಷಿ, ವಿಟ್ಲ ಸಿಡಿಪಿಒ ಸುಧಾ ಜೋಷಿ, ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಹಾಗೂ ಇಲಾಖಾ ಮೇಲ್ವಿಚಾರಕಿಯರು, ಅಂ. ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸದಸ್ಯರು ಉಪಸ್ಥಿತರಿದ್ದರು.