ಬಂಟ್ವಾಳ; ಇಲ್ಲಿನ ಪುರಸಭೆಯು 2011-12 ನೇ ಸಾಲಿನಲ್ಲಿ ಕರವಸೂಲಾತಿಗೆ ಸಂಬಂಧಿಸಿ ಜಾರಿಗೊಳಿಸಿದ ವಿಶೇಷ ಕಾರ್ಯಕ್ರಮಕ್ಕೆ ಸಿಎಂಎಕೆ ಬೆಂಗಳೂರು ಸಂಸ್ಥೆಯ ರಾಜ್ಯಮಟ್ಟದ ಬಹುಮಾನ ಲಭಿಸಿದೆ. ರಾಜ್ಯದ ನಗರ ಸ್ಥಳಿಯಾಡಳಿತ ಸಂಸ್ಥೆ(ಪುರಸಭೆ, ನಗರ ಪಂಚಾಯತ್, ನಗರ ಸಭೆ)ಗಳ ವಿಶಿಷ್ಟ ಕಾರ್ಯಕ್ರಮಗಳಿಗೆ ಸಿಎಂಎಕೆ ಸಂಸ್ಥೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದ್ದು, ಇದರಂತೆ ಬಂಟ್ವಾಳ ಪುರಸಭೆಯು ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿದ್ದು, 50 ಸಾವಿರ ನಗದು ಹಾಗೂ ಪ್ರಶಸ್ತಿಫಲಕ ಪಡೆದುಕೊಂಡಿದೆ.

ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ರವರು ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ನಗರಾಭಿವೃದ್ದಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಪೌರಾಡಳಿತ ಸಚಿವ ಕಮರುಲ್ ಇಸ್ಲಾಂ ರವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಿಎಂಎಕೆ ಸಂಸ್ಥೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಂಟ್ವಾಳ ಪುರಸಭೆಯ ಆಗಿನ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ ನೇತೃತ್ವದಲ್ಲಿ ಕರವಸೂಲಾತಿಗಾಗಿ ವಿಶೇಷ ಆಂದೋಲನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಮೂಲಕ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ವಸೂಲಾತಿಯಲ್ಲೂ ಪುರಸಭೆ ಯಶಕಂಡಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆಯನ್ನು ಸಿಎಂಎಕೆ ಬೆಂಗಳೂರು ಸಂಸ್ಥೆ ಆಯ್ಕೆ ಮಾಡಿದೆ.