ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಎ.26ರಂದು ಬೆಳಿಗ್ಗೆ 9ರಿಂದ ಪಡುಕೊಣಾಜೆಯಲ್ಲಿ ಕ್ರೀಡಾಕೂಟ, ಬೀಡಿಕಟ್ಟುವ ಸ್ಪರ್ಧೆ, ಮೇ.1ರಂದು ಕಾರ್ಮಿಕರ ಸಮಾವೇಶ ಮತ್ತು ಮೇ.2ರಂದು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಶಿರ್ತಾಡಿ ಪಂಚಾಯಿತಿ ಕಚೇರಿಯ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಕಾರ್ಮಿಕ ಸಂಘದ ವಕ್ತಾರ ಸುದತ್ತ ಜೈನ್ ಹೇಳಿದರು.
ಇಲ್ಲಿನ ಪ್ರಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಎ.26ರಂದು ಬೆಳಿಗ್ಗೆ ಬೀಡಿಕಟ್ಟುವ ಸ್ಪರ್ಧೆ ಮತ್ತು ವಿವಿಧ ಕ್ರೀಡಾಕೂಟಗಳು ನಡೆಯಲಿದ್ದು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಮತ್ತು ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಓಂ ಶ್ರೀ ದುರ್ಗಾ ಎಂಬ ಹೆಸರಿನ ಮಹಿಳಾ ಸಂಘಟನೆಯನ್ನು ಪ್ರಾರಂಭಿಸಲಾಗುವುದು. ಮೇ.1ರಂದು ಸಂಜೆ 7 ಗಂಟೆಗೆ ಕಾರ್ಮಿಕರ ಸಮಾವೇಶ ನಡೆಯಲಿದ್ದು ಮಂಗಳೂರು ಸಹಾಯಕ ಆಯುಕ್ತ ಡಿ.ಜಿ.ನಾಗೇಶ್, ಮುಸ್ಲಿಂ ಧರ್ಮಗುರು ಅಬೂ ಸೂಫಿಯಾನ್ ಮದನಿ, ಕೊಣಾಜೆಕಲ್ಲು ಸಿದ್ದಾಶ್ರಮದ ರಾಮದಾಸ್.ಜಿ, ಶಿರ್ತಾಡಿಯ ಕ್ರೈಸ್ತ ಧರ್ಮಗುರು ಪ್ರಾನ್ಸ್ಸ್ ಕ್ರಾಸ್ತ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಮೂಡುಬಿದಿರೆಯ ಜೈನ್ಪೇಟೆಯಿಂದ ಬೆಟ್ಕೇರಿಯವರೆಗೆ ರಸ್ತೆಯು ಕಿರಿದಾಗಿದ್ದು ಇಲ್ಲಿ ದಿನ ನಿತ್ಯ ಕ್ರಶರ್ನ ವಾಹನಗಳು ಮತ್ತು ಟಿಪ್ಪರ್ಗಳ ಓಡಾಟದಿಂದಾಗಿ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ರಸ್ತೆಯನ್ನು ಅಗಲೀಕರಣಗೊಳಿಸಬೇಕೆಂದು ಪ್ರತಿಭಟನೆ ನಡೆಸಿದ್ದು ಮೂರು ತಿಂಗಳೊಳಗಾಗಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಯಾವುದೇ ಕೆಲಸದಲ್ಲಿ ಪ್ರಗತಿಯಾಗಿಲ್ಲ ಹಾಗೂ ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮೇ.2ರಂದು ಬೆಳಿಗ್ಗೆ 10ರಿಂದ ಶಿರ್ತಾಡಿ ಗ್ರಾ.ಪಂ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಜಕ್ರಿಬೆಟ್ಟು, ಪ್ರಧಾನ ಕಾರ್ಯದರ್ಶಿ ದಿನೇಶ್ ಜೆ.ಪಿ ಪಡುಕೊಣಾಜೆ, ಮಹೇಂದ್ರ ಮಾಯಿಲೋಡಿ, ವಿಜಯೇಂದ್ರ ಎಸ್.ಕೋಟ್ಯಾನ್ ಉಪಸ್ಥಿತರಿದ್ದರು.