ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿ ತೆರೆದ ಸ್ಥಿತಿಯಲ್ಲಿರುವ ಕೊಳವೆಬಾವಿ ಹಾಗೂ ಅಪಾಯಕಾರಿ ಕಲ್ಲಿನಕೋರೆಗಳನ್ನು ಪತ್ತೆ ಹಚ್ಚಿ ಮೇ 20ರೊಳಗೆ ವರದಿ ಸಿದ್ಧಪಡಿಸಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ತಾಲೂಕುಗಳ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ನಗರಾಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಕಳೆದ ವರ್ಷ ಕಲ್ಲಿನಕೋರೆಯಲ್ಲಿ ನೀರಿಗೆ ಬಿದ್ದು 5 ಮಂದಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಅಪಾಯಕಾರಿ ಕಲ್ಲಿನಕೋರೆಗಳಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಇದರಂತೆ ಸುಳ್ಯದಲ್ಲಿ 38, ಪುತ್ತೂರಿನಲ್ಲಿ 72, ಬೆಳ್ತಂಗಡಿಯಲ್ಲಿ 25, ಬಂಟ್ವಾಳದಲ್ಲಿ 30, ಮೂಡಬಿದಿರೆಯಲ್ಲಿ 21, ಮೂಲ್ಕಿಯಲ್ಲಿ 2 ಹಾಗೂ ಮಂಗಳೂರಿನಲ್ಲಿ 29 ಸೇರಿ ಒಟ್ಟು 220 ಅಪಾಯಕಾರಿ ಕಲ್ಲಿನಕೋರೆಗಳನ್ನು ಮುಚ್ಚಲಾಗಿತ್ತು. ಮಂಗಳೂರಿನಲ್ಲಿ 20, ಮೂಲ್ಕಿಯಲ್ಲಿ 12, ಮೂಡಬಿದಿರೆಯಲ್ಲಿ 13, ಬಂಟ್ವಾಳದಲ್ಲಿ 59, ಪುತ್ತೂರಿನಲ್ಲಿ 49 ಕಲ್ಲಿನಕೋರೆಗಳ ಸುತ್ತ ತಡೆಬೇಲಿ ಹಾಕಲಾಗಿತ್ತು ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಲಭ್ಯ ಅಂಕಿ-ಅಂಶದಂತೆ ಸುಳ್ಯದಲ್ಲಿ 38, ಪುತ್ತೂರಿನಲ್ಲಿ 129, ಬೆಳ್ತಂಗಡಿಯಲ್ಲಿ 57, ಬಂಟ್ವಾಳದಲ್ಲಿ 171, ಮೂಡಬಿದಿರೆಯಲ್ಲಿ 129, ಮೂಲ್ಕಿಯಲ್ಲಿ 29 ಹಾಗೂ ಮಂಗಳೂರಿನಲ್ಲಿ 211 ಸೇರಿ ಒಟ್ಟು 856 ಕಲ್ಲಿನಕೋರೆಗಳಿವೆ. ಇದರಲ್ಲಿ 365 ಕೋರೆಗಳಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ಬಾಕಿ ಇವೆ ಎಂದು ಅವರು ವಿವರಿಸಿದರು.
ಗಣಿಗಾರಿಕೆ ಮಾಡುವವರೇ ಅಪಾಯಕಾರಿ ಕೋರೆಗಳನ್ನು ಮುಚ್ಚಬೇಕು. ಹಳೆಯ ಕೋರೆಗಳನ್ನು ಮುಚ್ಚಲು ಗ್ರಾ.ಪಂ. ನರೇಗಾ ಯೋಜನೆ ಸೇರಿದಂತೆ ಇತರ ಅನುದಾನ ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ತೆರೆದ ಕೊಳವೆಬಾವಿಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಮುಚ್ಚಳ ಹಾಕಲು ಸೂಚಿಸಲಾಗಿದೆ ಎಂದರು.