ಉಡುಪಿ : ಭೂಕಂಪದಿಂದ ನಡುಗಿದ ನೇಪಾಲದಲ್ಲಿ ಮಣಿಪಾಲದ ವೈದ್ಯಕೀಯ ತಂಡ ಸೇವೆ ಸಲ್ಲಿಸಿದೆ.

ಮಣಿಪಾಲ ವಿ.ವಿ.ಯ ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ| ರಾಮಚಂದ್ರ ಕಾಮತ್, ಶುಶ್ರೂಷಕ ಸಂತೋಷ ನಾಯಕ್ ಅವರು ಆಮ್ಮಾ (ಅಸೋಸಿಯೇಶನ್ ಆಫ್ ಮೆಡಿಕಲ್ ಡಾಕ್ಟರ್ ಆಫ್ ಏಷ್ಯಾ) ಜಪಾನ್ ತಂಡದೊಂದಿಗೆ ಸೇವೆ ಸಲ್ಲಿಸಿದರು. ಆಮಾxದ ಕೆಂಬೋಡಿಯ, ಜಪಾನ್, ಬಾಂಗ್ಲಾ, ಫಿಲಿಪ್ಪಿನ್ಸ್, ಹಾಗೂ ನೇಪಾಲದ ಸದಸ್ಯರೂ ಜತೆಗೂಡಿದ್ದರು.
ತಂಡದ ಸದಸ್ಯರು ಗೋರ್ಖಾ, ರಸ್ವಾ, ನುವಾಕೋಟ್, ಸಿಂದುಪಾಲ್ ಚೌಕ್ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರವಾಸ ನಡೆಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಬಿದ್ದು ಹೋದ ಮನೆಗಳು, ಮನೆಗಳ ಎದುರು ಡೇರೆಗಳಲ್ಲಿ ವಾಸ ಸಾಮಾನ್ಯ ದೃಶ್ಯವಾಗಿತ್ತು. ಪ್ರಸ್ತುತ ಅಲ್ಲಿ ಆಹಾರಧಾನ್ಯ ವಿತರಣೆ ನಡೆಯುತ್ತಿದೆ. ನೀರಿನ ಕೊರತೆಯಿಂದಾಗಿ ಮ್ಯಾಗಿಯನ್ನು ಪುಡಿಪುಡಿ ಮಾಡಿ ತಿನ್ನುತ್ತಿರುವುದನ್ನು ಡಾ| ರಾಮಚಂದ್ರ ಕಾಮತ್ ನೋಡಿದ್ದಾರೆ.
ಡಾ| ಕಾಮತ್ ಅವರು ಮಂಗಳವಾರ ನೇಪಾಲದ ವಿಮಾನ ನಿಲ್ದಾಣದಲ್ಲಿರುವಾಗಲೇ ಭೂಕಂಪದ ಅನುಭವವಾಯಿತು. ಆ ಹತ್ತೇ ನಿಮಿಷಗಳಲ್ಲಿ ವಿಮಾನ ನಿಲ್ದಾಣದೊಳಗೆ ನಿಲ್ದಾಣದ ಸಿಬಂದಿಯಾಗಲೀ ಪ್ರಯಾಣಿಕರಾಗಲೀ ಇರದೆ ಹೊರಗೆ ಓಡಿ ಬಂದದ್ದನ್ನು ಕಣ್ಣಾರೆ ಕಂಡಿರುವುದಾಗಿ ಕಾಮತ್ ತಿಳಿಸಿದ್ದಾರೆ.