ಪರಂಪರೆಯ ಹಾದಿಯಲ್ಲಿ ಯುವ ಪೀಳಿಗೆ ಮುನ್ನಡೆಯಲಿ : ಶ್ರೀ ಸಂಯಮೀಂದ್ರ ತೀರ್ಥ
ಮೂಡುಬಿದರೆ: ಗೌಡ ಸಾರಸ್ವತ ಸಮಾಜ ಬಾಂಧವರು ಪರಂಪರೆ, ಆಚಾರ ವಿಚಾರವನ್ನು ಉಳಿಸಿಕೊಂಡು ಬೆಳೆದವರು. ಯುವ ಪೀಳಿಗೆ ಹಿರಿಯರ ಯಶಸ್ಸಿನ ಹಾದಿಯಲ್ಲಿ ಮುನ್ನಡೆದು ಸಮಾಜದ ಹಿರಿಮೆಯನ್ನು ಬೆಳೆಸುವಂತಾಗಬೇಕು ಎಂದು ಶ್ರೀ ಕಾಶೀಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು.

ಅವರು ಕಲ್ಲಮುಂಡ್ಕೂರಿನ ಶ್ರೀ ವಿಠೋಭಮಾಯಿ ಮಂದಿರದ ಆವರಣದಲ್ಲಿ ನೂತನವಾಗಿ 20ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಸುಧೀಂದ್ರ ಮಂಟಪ ಸಭಾಗೃಹವನ್ನುಉದ್ಘಾಟಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ನೂತನ ಪಾಕಶಾಲೆಯನ್ನೂ ಅವರು ಉದ್ಘಾಟಿಸಿದರು.
ಮಂದಿರದಲ್ಲಿ ದೇವತಾ ಪೂಜೆಯ ನಂತರ ಸೂತನ ಸಭಾಗೃಹದ ದ್ವಾರಪೂಜೆ, ಮುಹೂರ್ತ ನಿರೀಕ್ಷಣೆಯ ಧಾರ್ಮಿಕ ಚಟುವಟಿಕೆಗಳು ನಡೆದವು. ಕಲ್ಲಮುಂಡ್ಕೂರು ಪೇಟೆಯ ಜಿ.ಎಸ್. ಬಿ. ಸಮಾಜದ ಮಂದಿರದ ಆಡಳಿತ ಸಮಿತಿ ವತಿಯಿಂದ ಶ್ರೀಗಳವರ ಪಾದಪೂಜೆ,ಕಾಣಿಕೆ ಸಮರ್ಪಣೆ ನಡೆಯಿತು.
ಸಮಾಜದ ಅಧ್ಯಕ್ಷ ಕೆ. ಶಾಂತಾರಾಮ ಕಾಮತ್ ಅಧ್ಯಕ್ಷತೆಯಲ್ಲಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ದೇವದರ್ಶನ ಪಾತ್ರಿಯವರಾದ ವಸಂತ ನಾಯಕ್ ಫಲಿಮಾರ್ಕಾರ್ ಶುಭಾಶಂಸನೆಗೈದು ವಿಠೋಬ ರಖುಮಾಯಿ ಜಾತಿ, ಮತ ಭೇಧವಿಲ್ಲದೇ ಪೂಜಿಸುವ ದೇವರಾಗಿದ್ದು ಭಕ್ತಾದಿಗಳ ಮನೋಭಿಲಾಷೆಯನ್ನು ನೆರವೇರಿಸಿ ಕೊಡುವ ಅಧ್ಬುತ ಮಹಿಮೆ ಹೊಂದಿದ್ದಾರೆ ಎಂದರು.
ಕಲ್ಲಮುಂಡ್ಕೂರಿನ ಮಾಲ್ದಬೆಟ್ಟು ಸುಭಾಶ್ಚಂದ್ರ ಪಡಿವಾಳ್ ಮಾತನಾಡಿ ತಮ್ಮ ತಂದೆ ಶ್ರೀಧರ ಪಡಿವಾಳರು ಮಂದಿರಕ್ಕೆ ಸ್ಥಳದಾನ ಮಾಡಿರುವುದನ್ನು ಸ್ಮರಿಸಿ ಜಿಎಸ್.ಬಿ ಸಮಾಜ ಬಾಂಧವರು ಧರ್ಮಶ್ರದ್ಧೆಯಿಂದ ಇತರರಿಗೆ ಅನುಕರಣೀಯರಾಗಿದ್ದಾರೆ ಎಂದರು. ಉದ್ಯಮಿ ಅಂಡಾರು ರಾಮದಾಸ ಕಿಣಿ, ಉಡುಪಿ ಸಾಯಿರಾಧಾ ಗ್ರೂಫ್ನ ಆಡಳಿತ ನಿರ್ದೇಶಕ ಮನೋಹರ ಎಸ್. ಶೆಟ್ಟಿ, ದುಬೈನ ಬಾಲಚಂದ್ರ ಪಿ.ನಾಯಕ್ ಮುಖ್ಯ ಅತಿಥಿಗಳಾಗಿದ್ದರು.
ಮಂದಿರದ ಸ್ಥಳದಾನಿ ಸುಭಾಶ್ಚಂದ್ರ ಪಡಿವಾಳ್, ದಾನಿಗಳಾದ ಅಂಡಾರು ರಾಮದಾಸ ಕಿಣಿ, ಉಡುಪಿ ಮನೋಹರ ಎಸ್. ಶೆಟ್ಟಿ, ಬಾಲಚಂದ್ರ ಪಿ.ನಾಯಕ್ ಮಂದಿರದ ಅಧ್ಯಕ್ಷರಾಗಿದ್ದ ವೆಂಕಟೇಶ ಕಾಮತ್, ಅರ್ಚಕರಾಗಿದ್ದ ವಿಠಲದಾಸ್ ಭಟ್, ಮಂದಿರದ ಮೇಲ್ಛಾವಣಿಯ ದಾನಿ ಸುಬ್ರಾಯ ಭಟ್, ಮಂದಿರದ ಯಶಸ್ಸಿಗೆ ದುಡಿದ ಬಾಲಕೃಷ್ಣ ಪಾಂಡುರಂಗ ಕಾಮತ್, ಕಟ್ಟಡ ಕಾಮಗಾರಿ ಗುತ್ತಿಗೆದಾರ ಅರುಣ್ ಕುಮಾರ್ ಭಟ್, ಸಂದೀಪ್ ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು.
ಆಡಳಿತ ಸಮಿತಿ ಕಾರ್ಯದರ್ಶಿ ಕೆ.ರವೀಂದ್ರ ಭಟ್, ಕೆ. ಕಮಲಾಕ್ಷ ಭಟ್, ನಾಗರಾಜ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ವರದರಾಯ ಕಾಮತ್ ಸ್ವಾಗತಿಸಿದರು. ಎಂ.ಶಾಂತಾರಾಮ ಕುಡ್ವಾ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ವೆಂಕಟೇಶ ಭಟ್ ವಂದಿಸಿದರು.