ಬಂಟ್ವಾಳ:ಕಳೆದ ಐದು ವರ್ಷಗಳ ಹಿಂದೆ ಬಂಟ್ವಾಳ-ಮೂಡುಬಿದ್ರೆ ರಸ್ತೆಯ ಸೋರ್ಣಾಡು ಎಂಬಲ್ಲಿ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ತಮಿಳ್ನಾಡು ಮೂಲದ ಇಬ್ಬರು ಅಂತರ್ರಾಜ್ಯ ದರೋಡೆಕೋರರ ಬಿಡುಗಡೆಗೆ ಜಾಮೀನು ನೀಡಿ ಸಹಕರಿಸಿದ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರು ಜಾಮೀನುದಾರರಿಗೆ ಇಲ್ಲಿನ ನ್ಯಾಯಾಲಯವು ರೂ 3.36ಲಕ್ಷ ಮೊತ್ತದ ದಂಡ ವಿಧಿಸಿದ ಘಟನೆ ಗುರುವಾರ ನಡೆದಿದೆ.
ಬಂಧಿತರನ್ನು ಪುತ್ತೂರಿನಲ್ಲಿ ಗುಜರಿ ವ್ಯಾಪಾರ ಅಂಗಡಿ ನಡೆಸುತ್ತಿರುವ ಇಸ್ಮಾಯಿಲ್ ಮತ್ತು ಈತನ ಸ್ನೇಹಿತ ರಿಕ್ಷಾ ಚಾಲಕ ಹಂಝ ಉರಿಮಜಲು ಎಂದು ಗುರುತಿಸಲಾಗಿದೆ.
ಈ ಪೈಕಿ ಇಸ್ಮಾಯಿಲ್ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ಬಂಧಿಸಿದ್ದರೆ, ಹಂಝನನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ಕಳೆದ ಐದು ವರ್ಷಗಳ ಹಿಂದೆ ಬಂಧನಕ್ಕೀಡಾದ ತಮಿಳ್ನಾಡು ಮೂಲಕ ಇಬ್ಬರು ದರೋಡೆಕೋರರಿಗೆ ಬಿ.ಸಿ.ರೋಡ್ನ ವಕೀಲರೊಬ್ಬರ ಸಲಹೆಯಂತೆ ತಲಾ 12 ಪ್ರಕರಣಗಳಂತೆ ಒಟ್ಟು 24 ಪ್ರಕರಣಗಳಿಗೆ ಇವರಿಬ್ಬರು ಜಾಮೀನು ನೀಡಿದ್ದರು ಎನ್ನಲಾಗಿದೆ.
ಇದೀಗ ದರೋಡೆಕೋರರು ಜೈಲಿನಿಂದ ಬಿಡುಗಡೆಗೊಂಡ ಬಳಿಕ ವಾರಂಟ್ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗದಿರುವ ಹಿನ್ನೆಲೆಯಲ್ಲಿ ಜಾಮೀನುದಾರರಿಗೆ ನ್ಯಾಯಾಲಯ ವಾರಂಟ್ ಹೊರಡಿಸಿದ ಪರಿಣಾಮ ಇವರಿಬ್ಬರನ್ನು ಬಂಧಿಸಿ ಕರೆ ತರುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರಾದ ಲೋಕೇಶ್, ಬಾಲಕೃಷ್ಣ ಗೌಡ ಮತ್ತು ಚಿದಾನಂದ ರೈ ವಿಟ್ಲ ಇವರು ಯಶಸ್ವಿಯಾಗಿದ್ದಾರೆ.
ಬಂಧಿತ ಇಸ್ಮಾಯಿಲ್ಗೆ ರೂ.36ಸಾವಿರ ಮತ್ತು ಹಂಝನಿಗೆ ರೂ 3ಲಕ್ಷ ಮೊತ್ತದ ದಂಡ ವಿಧಿಸಿ ಇದೇ 13ರೊಳಗೆ ಪಾವತಿಸುವಂತೆ ಇಲ್ಲಿನ ಜೆಎಂಸಿ ನ್ಯಾಯಾಲಯ ಸೂಚಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ:
ಕಳೆದ 2010ರಲ್ಲಿ ಸೋರ್ಣಾಡು ಮುಖ್ಯ ರಸ್ತೆ ಬಳಿ ಇರುವ ಕ್ರೈಸ್ತರೊಬ್ಬರ ಮನೆಗೆ ಮಧ್ಯಾಹ್ನ ವೇಳೆ ಗುಜರಿ ವ್ಯಾಪಾರಿಗಳಂತೆ ಬಂದಿದ್ದ ತಮಿಳ್ನಾಡು ಮೂಲದ ಬಾಲಸುಬ್ರಹ್ಮಣ್ಯಂ ಮತ್ತು ಮುರುಗನ್ ಎಂಬವರು ಮನೆ ಬೀಗ ಮುರಿಯಲು ಯತ್ನಿಸಿದ್ದಾರೆ. ಇದೇ ವೇಳೆ ಮನೆಯ ಮೇಲಿನ ಮಹಡಿಯಲ್ಲಿ ಓದುತ್ತಾ ಕುಳಿತಿದ್ದ ಯುವಕ ಬೊಬ್ಬೆ ಹಾಕಿದಾಗ ಕಳ್ಳರು ರಸ್ತೆಯಲ್ಲಿ ಓಡುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ಬೆನ್ನಟ್ಟಿ ಹಿಡಿದು ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದರು.
ಅಂದಿನ ಇನ್ಸ್ಪೆಕ್ಟರ್ ನಂಜುಂಡೇ ಗೌಡರು ಇವರಿಬ್ಬರನ್ನು ಭಾರೀ ವಿಚಾರಣೆಗೊಳಪಡಿಸಿದಾಗ ಇವರು ಕಳವು ನಡೆಸಿದ್ದ ಒಟ್ಟು ರೂ 23ಲಕ್ಷ ಮೊತ್ತದ 28 ಪ್ರಕರಣಗಳು ಬೆಳಕಿಗೆ ಬಂದಿತ್ತು. ಬಂಟ್ವಾಳ ಗ್ರಾಮಾಂತರ, ನಗರ ಮತ್ತು ವಿಟ್ಲ ಸಹಿತ ಬಜ್ಪೆ, ಉಪ್ಪಿನಂಗಡಿ, ಪುತ್ತೂರು ಗ್ರಾಮಾಂತರ, ಬೆಳ್ತಂಗಡಿ ಮತ್ತಿತರ ಪೊಲೀಸ್ ಠಾಣೆಯಲ್ಲಿಯೂ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಕ್ಕಾಗಿ ಅಂದು ತಮಿಳ್ನಾಡಿಗೆ ತೆರಳಿದ್ದ ಇಲ್ಲಿನ ಪೊಲೀಸರಿಗೆ ಅಲ್ಲಿನ ತಿರುವನ್ವೇಲು ಜಿಲ್ಲೆಯ ಶಂಕರನ್ಕೊಯಿಲ್ ತಾಲ್ಲೂಕಿನ ತೆಂಕಪನ್ವದೈಲ್ಚಕ್ರಂ ನಿವಾಸಿ ಅಣ್ಣಮಲೈ ಎಂಬಾತನ ಜ್ಯುವೆಲ್ಲರಿಯಲ್ಲಿ ರೂ 23ಲಕ್ಷ ಮೌಲ್ಯದ ಚಿನ್ನಾಭರಣ ಮಾರಾಟ ಮಾಡಿರುವುದು ಪತ್ತೆಯಾಗಿತ್ತು.
ಈ ನಡುವೆ ಇವರ ತಂಡದ ಇನ್ನೊಬ್ಬ ಸದಸ್ಯ ಮಾಡಸ್ವಾಮಿ ಅನಾರೋಗ್ಯದಿಂದ ಅಲ್ಲೇ ಸಾವನ್ನಪ್ಪುವ ಮೂಲಕ ಪೊಲೀಸರಿಂದ ಬಚಾವಾಗಿದ್ದನು. ಇಲ್ಲಿನ ಕಳ್ಳರ ತಂಡವು ಕರ್ನಾಟಕ ಮಾತ್ರವಲ್ಲದೆ ಕೇರಳ ಮತ್ತಿತರ ರಾಜ್ಯಗಳಿಗೆ ಮೂರ್ನಾಲ್ಕು ಮಂದಿ ಪ್ರತ್ಯೇಕ ತಂಡವಾಗಿ ತೆರಳಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಹಗಲಿನಲ್ಲೇ ಕಳವು ಮತ್ತು ದರೋಡೆ ಕೃತ್ಯ ಎಸಗುತ್ತಿರುವ ಬಗ್ಗೆ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದರು.
ಇದೀಗ ಎಎಸ್ಪಿ ರಾಹುಲ್ ಕುಮಾರ್ ಮಾರ್ಗದರ್ಶನದಂತೆ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಮತ್ತು ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್ ನೇತೃತ್ವದ ಪೊಲೀಸರು ಜಾಮೀನು ನೀಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗುಪ್ತ ಕಾರ್ಯ ಚರಣೆ ನಡೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದೆ.