ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 150ಕ್ಕೂ ಮಿಕ್ಕಿ ಮಂದಿಗೆ ಕಾಡುತ್ತಿರುವ ‘ಡೆಂಗೆ’ ಜ್ವರಬಾಧೆ ಪ್ರಕರಣ ಪ್ರಥಮ ಬಾರಿಗೆ ಕಾಣಿಸಿಕೊಂಡ ರಾಯಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದೆ ಇಲ್ಲಿನ ನಾಗರಿಕರು ಮತ್ತಷ್ಟು ಆತಂಕಕ್ಕೀಡಾಗಿರುವುದು ಕಂಡು ಬಂದಿದೆ.

ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಇಲ್ಲಿನ ವೈದ್ಯಾಧಿಕಾರಿ ಡಾ.ರಾಜೇಶ್ ಶೆಟ್ಟಿ ಅವರು ತರಬೇತಿ ನೆಪದಲ್ಲಿ ವರ್ಗಾವಣೆಗೊಂಡ ಬಳಿಕ ವರ್ಷಕ್ಕೊಮ್ಮೆ ತರಬೇತಿ ಹಂತದಲ್ಲಿರುವ ವೈದ್ಯರನ್ನು ನಿಯೋಜಿಸಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಶುಶ್ರೂಷಕಿಯರು ಮತ್ತು ಪ್ರಯೋಗಾಲಯ ಸಿಬ್ಬಂದಿಗಳಿಗೆ ವೇತನ ಮಂಜೂರಾತಿಗೆ ಸ್ಥಳೀಯ ಪಂಜಿಕಲ್ಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಅವಲಂಬಿಸಬೇಕಿದೆ. ಇಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ.ರಾಮ್ರಾಜೇಶ್ ಅವರು ಪ್ರತೀ ಮಂಗಳವಾರ ಮತ್ತು ಗುರುವಾರ ರಾಯಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಬಂದು ದಿನವೊಂದಕ್ಕೆ ಸುಮಾರು 50ಕ್ಕೂ ಮಿಕ್ಕಿ ಮಂದಿ ರೋಗಿಗಳ ತಪಾಸಣೆ ನಡೆಸಿ ಧೈರ್ಯ ತುಂಬುತ್ತಿದ್ದಾರೆ ಎಂಬ ಅಭಿಪ್ರಾಯ ನಾಗರಿಕರಿಂದ ವ್ಯಕ್ತವಾಗಿದೆ. ಪಂಜಿಕಲ್ಲು ಆಸ್ಪತ್ರೆ ವ್ಯಾಪ್ತಿಗೆ ಸ್ಥಳೀಯ ಅಮ್ಟಾಡಿ, ಕುರಿಯಾಳ, ಮೂಡುನಡುಗೋಡು ಉಪಕೇಂದ್ರಗಳಿವೆ. ಇದರಿಂದಾಗಿ ದಿನವೊಂದಕ್ಕೆ ಸುಮಾರು 50 ಮಂದಿ ಹೊರರೋಗಿಗಳು ಬರುತ್ತಿದ್ದಾರೆ. ಇನ್ನೊಂದೆಡೆ ಪಂಜಿಕಲ್ಲು ಮಾತ್ರವಲ್ಲದೆ ಬಂಟ್ವಾಳ ಮೂಡ ವ್ಯಾಪ್ತಿಯ ಬಿ.ಸಿ.ರೋಡ್, ಮೊಡಂಕಾಪು ಉಪಕೇಂದ್ರ ಹೀಗೆ ಒಟ್ಟು 36ಸಾವಿರ ಮಂದಿಗೆ ಒಬ್ಬರೇ ವೈದ್ಯಾಧಿಕಾರಿ ಸಾಕೇ…? ಎನ್ನುತ್ತಿದ್ದಾರೆ ಇಲ್ಲಿನ ನಾಗರಿಕರು.
ರಾಯಿ ಆಸ್ಪತ್ರೆಗೆ ಸಂಗಬೆಟ್ಟು, ಕರ್ಪೆ , ರಾಯಿ, ಅರಳ 1 ಮತ್ತು 2 ಹೀಗೆ ಒಟ್ಟು ಐದು ಉಪಕೇಂದ್ರಗಳಿದ್ದು, ಒಟ್ಟು 14ಸಾವಿರ ಮಂದಿ ಜನಸಂಖ್ಯೆ ಹೊಂದಿದೆ. ರಾಯಿ ಪೇಟೆಗೆ ದೂರದ ಎತ್ತರ ಗುಡ್ಡ ಪ್ರದೇಶದಲ್ಲಿರುವ ಆಸ್ಪತ್ರೆಗೆ ರೋಗಿಗಳು ಹೋಗಲು ರಿಕ್ಷಾ ಮತ್ತಿತರ ವಾಹನ ಅವಲಂಬಿಸಬೇಕಿದ್ದು, ಆಸ್ಪತ್ರೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಶುಶ್ರೂಷಕಿ ಮತ್ತು ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಇದರಿಂದಾಗಿ ಇಲ್ಲಿನ ನಿಯೋಜಿತ ವೈದ್ಯಾಧಿಕಾರಿ ಮತ್ತು ಬೆರಳೆಣಿಕೆ ಮಂದಿ ಸಿಬ್ಬಂದಿಗಳು ಎಲ್ಲವನ್ನೂ ನಿಭಾಯಿಸುತ್ತಿದ್ದು, ಸ್ಥಳೀಯ ರಾಯಿ, ಕೊಯಿ, ಅರಳ, ಬೊಲ್ಪೊಟ್ಟು, ಕೈತ್ರೋಡಿ ಮತ್ತಿತರ ಕಡೆಗಳಲ್ಲಿ ಸುಮಾರು 25ಕ್ಕೂ ಮಿಕ್ಕಿ ಮಂದಿ ಡೆಂಗೆ ಪೀಡಿತರಿಗೆ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.
ಈ ಆಸ್ಪತ್ರೆಗೆ ಕೂಡಲೇ ಖಾಯಂ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಕಗೊಳಿಸಬೇಕು ಎಂಬ ನಾಗರಿಕರ ಆಗ್ರಹದ ನಡುವೆಯೇ ಈಚೆಗೆ ನಡೆದ ಇಲ್ಲಿನ ಗ್ರಾಮಸಭೆಯಲ್ಲಿಯೂ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.
ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ತನ್ನ ತವರು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ರಕ್ತಪರೀಕ್ಷೆ ಮತ್ತಿತರ ಮೂಲಭೂತ ಸೌಕರ್ಯದ ಜೊತೆಗೆ ಖಾಯಂ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಿಸಲು ವಿಶೇಷ ಮುತುವರ್ಜಿ ವಹಿಸಬೇಕು ಎಂಬ ಆಗ್ರಹ ಇಲ್ಲಿನ ನಾಗರಿಕರಿಂದ ವ್ಯಕ್ತವಾಗಿದೆ.
-ಮೋಹನ್ ಕೆ.ಶ್ರೀಯಾನ್