ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆ ಹೆಸರು ಹೇಳಿಕೊಂಡು ನಕಲಿ ದೂರವಾಣಿ ಕರೆ ಮೂಲಕ ವ್ಯಕ್ತಿಯೊಬ್ಬರ ಎಟಿಎಂ ಗುಪ್ತ ಕೋಡ್ ಸಂಖ್ಯೆ ಪಡೆದು ಅವರ ಖಾತೆಯಿಂದ ರೂ 70 ಸಾವಿರ ಮೊತ್ತದ ಹಣ ಡ್ರಾ ಮಾಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಇಲ್ಲಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಪನತ್ತೂರಂಡಿ ನಿವಾಸಿ ಪ್ರವೀಣ ರೈ ಎಂಬವರಿಗೆ ಹೊಸ ತೂಫಾನ್ ವಾಹನ ಖರೀದಿಸುವುದಕ್ಕಾಗಿ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆಯಿಂದ ರೂ 5ಲಕ್ಷ ಮೊತ್ತದ ಸಾಲ ಮಂಜೂರಾಗಿತ್ತು ಎನ್ನಲಾಗಿದೆ. ಈ ಪೈಕಿ ಇವರ ಎಸ್ಬಿ
ಖಾತೆಯಲ್ಲಿದ್ದ ಒಟ್ಟು ರೂ 3ಲಕ್ಷ ಮೊತ್ತದಲ್ಲಿ ಶನಿವಾರ ಬೆಳಿಗ್ಗೆ ರೂ 70 ಸಾವಿರ ಮೊತ್ತ ಡ್ರಾ ಮಾಡಿರುವ ಬಗ್ಗೆ ಇವರಿಗೆ ಮೊಬೈಲ್ ಸಂದೇಶ ಬಂದಿದೆ. ಇದಕ್ಕೂ ಮೊದಲು ಇವರ ಮೊಬೈಲ್ಗೆ ಸೋರ್ಣಾಡು ಕೆನರಾ ಬ್ಯಾಂಕಿನಿಂದ ಮಾತನಾಡುತ್ತಿದ್ದು, ನಿಮ್ಮ ಎಟಿಎಂ ಕಾರ್ಡಿನ ಕೋಡ್ ಸಂಖ್ಯೆ ಬೇಕು ಎಂದು ಅಪರಿಚಿತ ವ್ಯಕ್ತಿಯೊಬ್ಬರು ಪಡೆದುಕೊಂಡಿದ್ದಾರೆ ಎಂದು ಪುಂಜಾಲಕಟ್ಟೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪ್ರವೀಣ ಅವರು ವಿವರಿಸಿದ್ದಾರೆ. ಇದೇ ರೀತಿ ಎಟಿಎಂ ಕಾರ್ಡಿನ ಗುಪ್ತ ಕೋಡ್ ಸಂಖ್ಯೆ ಕೇಳಿಕೊಂಡು ಬರುವ ಅನಾಮಧೇಯ ಕರೆಗಳ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.