ಬಂಟ್ವಾಳ: ದೇಶದಲ್ಲಿ ಈ ಹಿಂದಿನ ‘ಉಳುವವನೇ ಹೊಲದೊಡೆಯ’ ಎಂಬ ರೈತಪರ ಮಹತ್ವದ ಸುಧಾರಣೆಗೆ ಬದಲಾಗಿ ಪ್ರಸಕ್ತ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿ ಕೊಡುವುದಕ್ಕಾಗಿ ರೈತ ವಿರೋಧಿ ನೀತಿ ಮೂಲಕ ರೈತರ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ ಎಂದು ಸಿಪಿಐನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ.ರಾವ್ ಆರೋಪಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಸಿಪಿಐ ವತಿಯಿಂದ ಬಿ.ಸಿ.ರೋಡ್ನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ಬಹಿರಂಗ ಅಹವಾಲು ಚಳುವಳಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಅಕಾಲಿಕ ಮಳೆ ಮತ್ತು ಬೆಲೆ ಅನಿಶ್ಚಿತತೆಯಿಂದ ಕಂಗೆಟ್ಟಿರುವ ರೈತರಿಗೆ ಸರ್ಕಾರವು ಧೈರ್ಯ ತುಂಬುವ ಬದಲಾಗಿ ಮಧ್ಯವರ್ತಿಗಳು ಮತ್ತು ಕೈಗಾರಿಕೋದ್ಯಮಿಗಳು ಮಾತ್ರ ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದಾರೆ. ಇದಕ್ಕಾಗಿ ರೈತರಿಗೆ ಧೈರ್ಯ ತುಂಬಲು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ‘ಬಹಿರಂಗ ಅಹವಾಲು ಚಳುವಳಿ’ ಮೂಲಕ ಮುಖ್ಯಮಂತ್ರಿ ಮತ್ತು ಪ್ರಧಾನಿ ಗಮನ ಸೆಳೆಯಲು ರಾಜ್ಯವ್ಯಾಪಿ ಚಳುವಳಿ ನಡೆಸುತ್ತಿದೆ ಎಂದರು.
ಸಿಪಿಐ ಜಿಲ್ಲಾ ಮುಖಂಡ ಪಿ.ಸಂಜೀವ, ಸುರೇಶ್ ಕುಮಾರ್, ಜಿಲ್ಲಾ ಮಂಡಳಿ ಸದಸ್ಯರಾದ ಸರಸ್ವತಿ ಕಡೇಶಿವಾಲಯ, ಚಂದ್ರಾವತಿ, ಪ್ರಮುಖರಾದ ಕೆ.ಈಶ್ವರ್, ಬಾಬು ಭಂಡಾರಿ, ಮತ್ತಿತರರು ಇದ್ದರು. ಆರಂಭದಲ್ಲಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ಜಾಥಾ ನಡೆಯಿತು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಶೇಖರ್, ಪ್ರಾಸ್ತಾವಿಕ ಮಾತನಾಡಿದರು. ಸುರೇಶ್ ಕುಮಾರ್ ವಂದಿಸಿದರು.