ಬಂಟ್ವಾಳ : ತಾಲೂಕು ಮಣಿನಾಲ್ಕೂರು ಗ್ರಾಮದ ನಿವಾಸಿ ದೇವಿಪ್ರಸಾದ್ ರೈ ಹಾಗೂ ಆತನ ತಾಯಿ ಜಯದೇವಿ ಎಂಬವರು ದೇವಿಪ್ರಸಾದ್ ರೈ ಅವರ ಪತ್ನಿ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ವಿಮಲಾ ಶೆಟ್ಟಿ ಯಾನೆ ನಿಶಿತ ಎಂಬವರನ್ನು ವರದಕ್ಷಿಣೆಗಾಗಿ ಹಿಂಸಿಸಿದ ಆರೋಪದಿಂದ ಬಂಟ್ವಾಳ ನ್ಯಾಯಾಲಯದ ನ್ಯಾಯಾಶ ಆರ್.ಮಹೇಶ್ ಅವರು ಬಿಡುಗಡೆ ಮಾಡಿ ತೀರ್ಪಿತ್ತಿದ್ದಾರೆ.


ಆ.21ರಂದು ಸಂಜೆ 4.15 ಗಂಟೆಗೆ ದೇವಿಪ್ರಸಾದ್ ರೈ ಅವರು ತನ್ನ ಪತ್ನಿಯ ತವರು ಮನೆಯಾದ ಅಮ್ಟಾಡಿಗೆ ಬಂದು ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಚಿನ್ನ ಮತ್ತು ಎರಡು ಲಕ್ಷ ರೂಪಾಯಿ ಹಣ ತರದಿದ್ದರೆ ತನ್ನ ಮನೆಗೆ ಬರುವುದು ಬೇಡ ಎಂದು ಬೈದು, ದೈಹಿಕ ಹಲ್ಲೆ ನಡೆಸಿ, ತಡೆಯಲು ಬಂದ ಪತ್ನಿಯ ತಂದೆ ರಾಮಣ್ಣ ಶೆಟ್ಟಿ ಅವರಿಗೆ ನಿನ್ನ ತಲೆ ತೆಗೆಯುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದು , ಹಲ್ಲೆಗೊಳಗಾದ ವಿಮಲಾ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಬಂಟ್ವಾಳ ಪೊಲೀಸರು ಆಸ್ಪತ್ರೆಗೆ ಬಂದು ವಿಮಲಾ ಶೆಟ್ಟಿ ಅವರ ಹೇಳಿಕೆ ಪಡೆದು ದೇವಿಪ್ರಸಾದ್ ರೈ ಹಾಗೂ ಆತನ ತಾಯಿ ವರದಕ್ಷಿಣೆಗಾಗಿ ತನ್ನ ಸೊಸೆಗೆ ಹಿಂಸೆ ನೀಡಲು ಮಗನಿಗೆ ಪ್ರೇರಣೆ ಮಾಡುತ್ತಿದ್ದಾರೆಂದು ಕೇಸು ದಾಖಲಿಸಿ ಬಂಟ್ವಾಳ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಬಂಟ್ವಾಳ ನ್ಯಾಯಾಶರು ಅಭಿಯೋಜನೆ ಕಡೆಯಿಂದ ಏಳು ಸಾಕ್ಷಿಗಳ ವಿಚಾರಣೆ ನಡೆಸಿ, ವಾದ ವಿವಾದ ಆಲಿಸಿ ಆರೋಪಿತರು ಮದುವೆಯ ಸಮಯದಲ್ಲಾಗಲೀ, ನಂತರವಾಗಲೀ ವರದಕ್ಷಿಣೆ ಕೇಳಿರುವುದಿಲ್ಲ . ಹಾಗೂ ದೇವಿಪ್ರಸಾದ್ ರೈ ಗೆ ಯಾವುದೇ ದುರಭ್ಯಾಸವಿಲ್ಲ ಎಂದು ವಿಮಲಾ ಶೆಟ್ಟಿ ತನ್ನ ಹೇಳಿಕೆಯಲ್ಲಿ ನ್ಯಾಯಾಲಯದ ಮುಂದೆ ಸಾಕ್ಷಿ ನುಡಿದಿದ್ದು , ಆರೋಪಿ ಎಲ್ಲಾ ಕಹಿ ವಿಚಾರವನ್ನು ಮರೆತು, ಫಿರ್ಯಾದಿದಾರಳನ್ನು ಸ್ವೀಕರಿಸಲು ತಯಾರಿದ್ದರೂ, ತಾನು ಹೋಗಲು ತಯಾರಿಲ್ಲ ಎಂದು ಹೇಳಿರುವುದರಿಂದ ಹಾಗೂ ಸಾಕ್ಷಿಗಳ ಹೇಳಿಕೆ ಒಂದಕ್ಕೊಂದು ಪೂರಕವಾಗಿಲ್ಲ ಮತ್ತು ಮದುವೆಯಾದ ಎರಡು ವರ್ಷಗಳ ನಂತರ ಪೊಲೀಸರಿಗೆ ದೂರು ನೀಡಿದ್ದರಿಂದ ಸಾಕ್ಷಿಗಳನ್ನು ನಂಬಲು ಸಾಧ್ಯವಿಲ್ಲ ಎಂದು ಆರೋಪಿ ಪರ ವಕೀಲರ ವಾದವನ್ನು ಎತ್ತಿಹಿಡಿದು, ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪಿತ್ತಿರುತ್ತಾರೆ. ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿ ತೋನ್ಸೆ ನಾರಾಯಣ ಪೂಜಾರಿ ಮತ್ತು ಯುವ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ವಾದಿಸಿದ್ದರು.

By suddi9

Leave a Reply

Your email address will not be published. Required fields are marked *