ಬಂಟ್ವಾಳ:ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘ (ರಿ.) ಇದರ ‘ಬೆಳ್ಳಿಹಬ್ಬ’ ಕಾರ್ಯಕ್ರಮದ ಪ್ರಯುಕ್ತ ವರ್ಷವಿಡೀ 25 ಹಿಂದುಳಿದ ಗ್ರಾಮಗಳನ್ನು ಗುರುತಿಸಿ ಮಾಧ್ಯಮ ಮೂಲಕ ಬೆಳಕು ಚೆಲ್ಲುವುದರ ಜೊತೆಗೆ ಅಲ್ಲಿನ ಗ್ರಾಮ ಪಂಚಾಯಿತಿ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದಾಗಿ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘ (ರಿ.) ಇದರ ‘ಬೆಳ್ಳಿಹಬ್ಬ’ ಕಾರ್ಯಕ್ರಮದ ಪ್ರಯುಕ್ತ ಬಿ.ಸಿ.ರೋಡ್‍ನಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಬೆಳ್ಳಿಹಬ್ಬ ಪ್ರಯುಕ್ತ ತಾಲೂಕಿನ ವಿವಿಧೆಡೆ ಮಾಧ್ಯಮ ಕಾರ್ಯಾಗಾರ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲು ಸಂಘದ ಸ್ಥಾಪಕ ಸದಸ್ಯರು ಮತ್ತು ಹಿರಿಯ ಪತ್ರಕರ್ತರೊಂದಿಗೆ ಸಮಾಲೋಚಿಸಿ ‘ಬೆಳ್ಳಿಹಬ್ಬ ಸಮಿತಿ’ ರಚಿಸಿ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬಂಟ್ವಾಳ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸುಕುಮಾರ್, ಹಿರಿಯ ಸಾಹಿತಿ ವಿ.ಸು.ಭಟ್, ನಿವೃತ್ತ ಶಿಕ್ಷಕ ಶಂಕರ ನಾರಾಯಣ ಭಟ್, ಪಾಣೆಮಂಗಳೂರು ಪೌರ ಸಮಿತಿ ಸಂಚಾಲಕ ಮುಸ್ತಾಫ, ಪುರುಷೋತ್ತಮ, ಆಶಿಕ್ ಕುಕ್ಕಾಜೆ ಮತ್ತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಸಂಘದ ಕೋಶಾಧಿಕಾರಿ ವಿಶ್ವನಾಥ ಬಂಟ್ವಾಳ್, ಸದಸ್ಯರಾದ ಆಶ್ರಫ್ ಪಾಣೆಮಂಗಳೂರು, ಸತೀಶ ಕುಮಾರ್, ಪದ್ಮನಾಭ ಶಂಭೂರು ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ವಂದಿಸಿದರು. ಜೊತೆ ಕಾರ್ಯದರ್ಶಿ ಫಾರೂಕ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.