ಬಂಟ್ವಾಳ: ಮುಂದಿನ 45 ದಿನದೊಳಗಾಗಿ ಪುರಸಭೆಯ ವಾರ್ಡ್ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಿ ತೋರಿಸಬೇಕು. ತಪ್ಪಿದ್ದಲ್ಲಿ ಪುರಸಭಾ ವ್ಯಾಪ್ತಿಯ ಗಲ್ಲಿ ಗಲ್ಲಿಗಳಲ್ಲಿ ದೇಣಿಗೆ ಹುಂಡಿಯನ್ನು ನಿರ್ಮಿಸಿ ಸಂಗ್ರಹವಾಗುವ ಹಣದಲ್ಲಿ ಸಾರ್ವಜನಿಕ ಕೆಲಸಗಳನ್ನು ಮಾಡುವ ಮೂಲಕ ಸರಣಿ ಪ್ರತಿಭಟನಾ ಆಂದೋಲನ ನಡೆಸಲಿದ್ದೇವೆ ಎಂದು ಎಸ್ ಡಿ  ಪಿ ಐ ಪುರಸಭಾ ಆಡಳಿತಕ್ಕೆ ಸವಾಲೆಸೆದಿದೆ.
ಟೆಂಡರ್ ಪ್ರಕ್ರಿಯೆ ಮುಗಿದಿರುವ ರಸ್ತೆಗೆ ಕಲ್ಲು ಮಣ್ಣು ಹಾಕಿ ಶ್ರಮದಾನ ನಡೆಸಿ ಪ್ರಚಾರ ಪಡೆಯುವ ಎಸ್ ಡಿ  ಪಿ ಐ ವಂತಿಗೆ ಸಂಗ್ರಹಿಸುವ ಪಕ್ಷ ಎಂದು ಪುರಸಭಾ ಉಪಾಧ್ಯಕ್ಷೆ ಯಾಸ್ಮೀನ್ ಮಾಡಿದ ಆರೋಪಕ್ಕೆ ಎಸ್ಡಿಪಿಐ ಪುರಸಭಾ ಸಮಿತಿ ಸದಸ್ಯ ಎ.ಎಂ.ಮುಶ್ತಾಕ್ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿ ಅಭಿವೃದ್ದಿಯ ಉತ್ತುಂಗದಲ್ಲಿರಬೇಕಾದ ಪುರಸಭಾ ವ್ಯಾಪ್ತಿಯೂ ಹಲವಾರ ಸಮಸ್ಯೆಗಳ ಆಗರವಾಗಿ ಸಾರ್ವಜನಿಕರ ಹಿಡಿಶಾಪಕ್ಕೆ ಒಳಗಾಗಿದೆ. ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳು ಕಸದ ಬುಟ್ಟಿ ಸೇರುತ್ತಿದೆಯೇ ವಿನಃ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ ಸುಮಾರು 34 ಸಾವಿರ ರುಪಾಯಿ ಹಣದಲ್ಲಿ ಪರ್ಲಿಯಾ ನರ್ಸಿಂಗ್ ಹೋಂನಿಂದ ಮಧ್ವ ಸಂಧಿಸುವ ಹಾಗೂ ಕೈಕಂಬದಿಂದ ಪರ್ಲಿಯಾ ಸಂಧಿಸುವ ಕೆಸರು ತುಂಬಿದ್ದ ರಸ್ತೆಯನ್ನು ಕಲ್ಲು, ಜಲ್ಲಿ ಹುಡಿಯನ್ನು ಹಾಕಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಲಾಗಿದೆ. ಇದರಿಂದ ತಲೆತಗ್ಗಿಸ ಬೇಕಾದ ಉಪಾಧ್ಯಕ್ಷೆ ಯಾಸ್ಮೀನ್ ಎಸ್ಡಿಪಿಐ ಪಕ್ಷದ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿದರು.
ಉಪಾಧ್ಯಕ್ಷೆಯ ವಾರ್ಡ್ನಲ್ಲಿ 1.9 ಕೋಟಿ ರುಪಾಯಿ ಮೊತ್ತದ ಅಭವೃದ್ದಿ ಕಾರ್ಯಗಳು ನಡೆದಿಲ್ಲ. ಈ ಬಗ್ಗೆ ಈಗಾಗಲೇ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆಯಲಾಗಿದ್ದು ಲೋಕಾಯುಕ್ತ ದೂರು ನೀಡಲಾಗುವುದು ಎಂದು ತಿಳಿಸಿದರು.
ನಾವು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ದಿ ಕಾರ್ಯಗಳಿಗೆ ಹಾಗೂ ಪಕ್ಷ ಸಂಘಟನೆಗೆ ಬಳಸಿಕೊಳ್ಳುತ್ತೇವೆಯೆ ಹೊರತು ಕಟ್ಟಡ ಪರಾವನಿಗೆಯನ್ನು ನೀಡಲು ಬಿಲ್ಡರ್ಗಳಿಂದ ಹಾಗೂ ಉದ್ಯಮಿಗಳಿಂದ ಹಣ ಪೀಕಿಸಿ ಜೇಬಿಗಿಳಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಟಿಯಲ್ಲಿ ಪುರಸಭಾ ಸದಸ್ಯ ಮೊನೀಶ್ ಅಲಿ, ಪಕ್ಷ ಪ್ರಮುಖರಾದ ರಿಯಾಝ್ ಪರ್ಲಿಯಾ, ಸಾಹುಲ್ ಎಸ್.ಎಚ್ ಇದ್ದರು.

By suddi9

Leave a Reply

Your email address will not be published. Required fields are marked *