ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಗುತ್ತಿಗಾರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಹದಿನೇಳು ವಯೋಮಿತಿಯ 28-32 ಕೆ.ಜಿ.ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಸಹನಾ ಎಂ.ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್.ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ನರ್ವಲ್ದಡ್ಡ ನಿವಾಸಿ ಕಟ್ಟಡ ಗುತ್ತಿಗೆದಾರರಾದ ಮೋಹನ್ ಶೆಟ್ಟಿ ಮತ್ತು ಹರಿಣಾಕ್ಷಿ ಶೆಟ್ಟಿ ದಂಪತಿಯ ಪುತ್ರಿ.
ಪ್ರಾಥಮಿಕ ವಿದ್ಯಾಭ್ಯಾಸದ ಹಂತದಲ್ಲೇ ಕರಾಟೆಯತ್ತ ಒಲವು ತೋರಿ ವಿಶೇಷ ಸಾಧನೆಗೈದು ರಾಜ್ಯ, ರಾಷ್ಟ್ರ ಹಾಗೂ ಅಂತರ್‍ರಾಷ್ಟ್ರ ಮಟ್ಟದ ಕರಾಟೆ ಛಾಂಪಿಯನ್ ಶಿಫ್‍ನಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕ್ರತಳಾದ ಸಹನಾ ಶೆಟ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಹಿಂದೆ ನಡೆಸಿರುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾಳೆ. ಭರತನಾಟ್ಯ ಕಲಾವಿದೆಯೂ ಆಗಿರುವ ಈಕೆ ಈಗಾಗಲೇ ತನ್ನ ಪ್ರತಿಭೆಗಾಗಿ ಮಡಂತ್ಯಾರು ಜೇಸಿ ಸಂಸ್ಥೆಯಿಂದ ಪ್ರಶಸ್ತಿಯನ್ನು ಪಡೆದಿರುತ್ತಾಳೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಗುತ್ತಿಗಾರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಹದಿನೇಳು ವಯೋಮಿತಿಯ 32-36 ಕೆ.ಜಿ.ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಸೋನಿ ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್.ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಹಿಂದೆ ನಡೆಸಿರುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾಳೆ. ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾಳೆ.