ಇಲ್ಲಿನ ಇರಾ ಸಮೀಪದ ಮಂಚಿ ಎಂಬಲ್ಲಿ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಂದು ಬಳಿಕ ತಾನೂ ಚೂರಿಯಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಬುಧವಾರ ನಡೆದಿದೆ.
ಎಲ್ಲರಿಗೂ ಚಿರ ಪರಿಚಿತರಾಗಿದ್ದ ಹಾಗೂ ಆತ್ಮೀಯರಾಗಿದ್ದ ಪದ್ಮನಾಭ ನಾಯ್ಕ್ ಈ ಕೃತ್ಯ ಎಸಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ಸ್ಥಳೀಯರು, ಘಟನಾ ಸ್ಥಳಕ್ಕೆ ದೌಡಾಯಿಸಿದರು. ಗುಂಪು ಗುಂಪಾಗಿ ಸೇರಿದ್ದ ಜನರನ್ನು ಚದುರಿಸಲು ಪೋಲಿಸರು ಸಾಹಸ ಪಡಬೇಕಾಯಿತು. ಪದ್ಮನಾಭ ಅವರ ಆತ್ಮೀಯ ವಲಯದವರು ಈ ಸುದ್ದಿಯನ್ನು ನಂಬಲು ತಯಾರಿರಲಿಲ್ಲ. ಪದೇ ಪದೇ ಪೋನ್ ಮೂಲಕ ಘಟನೆಯನ್ನು ಖಚಿತ ಪಡಿಸಿಕೊಳ್ಳುತ್ತಿರುವುದು ಕಂಡು ಬಂತು.
ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪದ್ಮನಾಭ ನಾಯಕ್ , ಮಂಚಿ ಗ್ರಾಮ ಪಂಚಾಯತ್‌ನ ಸದಸ್ಯರಾಗಿದ್ದಾರೆ.
ಪತ್ನಿ ಪುಪ್ಪಾವತಿ, ಮಕ್ಕಳಾದ ಪ್ರಥ್ವಿ( 6) ಮತ್ತು ಪೂರ್ವಿ (4) ಸಹಿತ ನಾಲ್ವರ ಶವ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಸ್ಥಳಕ್ಕೆ ಬಂಟ್ವಾಳ ಠಾಣಾ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.ಜನಪ್ರತಿನಿಧಿ, ಮುಖಂಡರ ಭೇಟಿ
ಘಟನಾ ಸ್ಥಳಕ್ಕೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ್ ದೇರಾಜೆ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್, ತಾಲೂಕು ಪಂಚಾಯತ್ ಸದಸ್ಯ ಮಾಧವ ಮಾವೆ, ಲವಿನಾ, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಸ್ ಚಂದ್ರ ಶೆಟ್ಟಿ, ಸಜಿಪ ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ಭಟ್ ಮತ್ತಿತರರು ಭೇಟಿ ನೀಡಿದ್ದಾರೆ.













