ಮುಂಬೈ: ಬಿಜೆಪಿ ಬೆಂಬಲಿಗರು ಬೇಜವಾಬ್ದಾರಿ ಹೇಳಿಕೆ ನೀಡಬಾರದೆಂದು ಮೋದಿ ಟ್ವೀಟ್ ಮಾಡಿದ ಬೆನ್ನಲ್ಲೇ ಶಿವಸೇನೆ ಮುಖಂಡರೊಬ್ಬರು ವಿಚಿತ್ರ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಪಾಕಿಸ್ತಾನವನ್ನ ನಾಶ ಮಾಡುತ್ತಾರೆ ಎಂದು ಶಿವಸೇನಾ ಮುಖಂಡ ರಾಮದಾಸ್ ಕದಂ ಹೇಳಿದ್ದಾರೆ. ಚುನಾವಣಾ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ, ಈ ಮಹಾ ನಾಯಕರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಚಿತ್ರವೆಂದರೆ, ನರೇಂದ್ರ ಮೋದಿ ಮತ್ತು ಉದ್ಧವ್ ಠಾಕ್ರೆ ಇಬ್ಬರೂ ಈ ಸಮಾರಂಭಕ್ಕೆ ಆಗಮಿಸುವ ಮುನ್ನ ರಾಮದಾಸ್ ಕದಂ ತಮ್ಮ ಕುಟುಕು ಭಾಷಣ ಮಾಡಿ ಮುಗಿಸಿದ್ದರು. ಬೆಳಗ್ಗೆಯಷ್ಟೇ ಇಂಥ ಹೇಳಿಕೆಗಳನ್ನ ಟ್ವಿಟ್ಟರ್’ನಲ್ಲಿ ಖಂಡಿಸಿದ್ದ ಮೋದಿ, ಇದೀಗ ಕದಂರ ಕಠೋರ ನುಡಿಗಳಿಗೆ ಯಾವ ಪ್ರತಿಕ್ರಿಯೆ ನೀಡಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ.