ಮಂಗಳೂರು: ಜಿಮ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ದುಷ್ಕರ್ಮಿ ಯುವಕರು ವಿನಾ ಕಾರಣ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಜ್ಪೆ ಸಮೀಪದ ಪೆರ್ಮುದೆ ಬಳಿ ಗುರುವಾರ ರಾತ್ರಿ 9ರ ಸುಮಾರಿಗೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಆಶಿಕ್(18) ಎಂದು ಗುರುತಿಸಲಾಗಿದೆ. ಈತ ಬಜ್ಪೆ ಸಮೀಪದ ಪೆರ್ಮುದೆಯಲ್ಲಿರುವ ಜಿಮ್ ಕೇಂದ್ರದಲ್ಲಿ ಜಿಮ್ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ಆಶಿಕ್ ಎಂದಿನಂತೆ ಜಿಮ್ ಮುಗಿಸಿ ಮನೆಗೆ ಹೋಗುತ್ತಿದ್ದ. ಈ ವೇಳೆ ಆಗಮಿಸಿದ ಆರೋಪಿಗಳಾದ ಕಿಶೋರ್, ಪ್ರಕಾಶ, ರೀತು, ಕಾಂತ ಹಾಗೂ ಚರಣ್ ಎಂಬ ಆರೋಪಿಗಳು ಆಶಿಕ್ ಮೇಲೆ ಏಕಾಏಕಿ ಹಲ್ಲೆ ನಡೆಸಿ, ವಿನಾಕಾರಣ ಬೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ಆಶಿಕ್ನನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾನೆ.
ಈ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಘಟನೆಯನ್ನು ಖಂಡಿಸಿದ್ದು, ಬಜ್ಪೆ ಠಾಣೆಗೆ ಧಾವಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಇವರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.