ಬಂಟ್ವಾಳ : ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದನ್ವಯ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ„ಕಾರಿ ಅವರ ನಿರ್ದೇಶನದ ಮೇರೆಗೆ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೈಪ್ ಕಾಂಪೋಸ್ಟ್ ಅಭಿಯಾನದಲ್ಲಿ ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾ.ಪಂ.ವತಿಯಿಂದ ಪೈಪ್ ಕಾಂಪೋಸ್ಟ್ (ಘನತ್ಯಾಜ್ಯ ನಿರ್ವಹಣೆ) ತಯಾರಿಕಾ ಘಟಕಗಳ ನಿರ್ಮಾಣ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಪರಿಶಿಷ್ಟ ಜಾತಿ-ಪಂಗಡಗಳ ಮನೆಗಳಿಗೆ ಗ್ರಾ.ಪಂ.ವತಿಯಿಂದ ಪೈಪ್ ಕಾಂಪೋಸ್ಟ್ ತಯಾರಿಕಾ ಘಟಕ ನಿರ್ಮಿಸಲಾಗುತ್ತಿದ್ದು ಇರ್ವತ್ತೂರುಪದವು ಬಿಎಸ್ ನಗರ ಪರಿಶಿಷ್ಟ ಕಾಲನಿಯಲ್ಲಿ ಪೈಪ್ ಕಾಂಪೋಸ್ಟ್ ತಯಾರಿಕಾ ಘಟಕವನ್ನು ಗ್ರಾ.ಪಂ.ಅಧ್ಯಕ್ಷೆ ಸುಜಾತ ಪ್ರಕಾಶ್ ಅವರು ಉದ್ಘಾಟಿಸಿದರು. ಗ್ರಾ.ಪಂ. ಮಾಜಿ ಸದಸ್ಯ ಎಂ. ರಾಜೀವ ಶೆಟ್ಟಿ ಎಡ್ತೂರು ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪರಿಸರ ಸ್ವಚ್ಛತೆ ಹಾಗೂ ಸಾವಯವ ಗೊಬ್ಬರ ತಯಾರಿಕೆ ದೃಷ್ಠಿಯಿಂದ ಸರಕಾರ ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತೀ ಗ್ರಾಮಸ್ಥರು ಇದನ್ನು ಅಳವಡಿಸಿ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

pkt1
ಪಂ.ಅ.ಅ„ಕಾರಿ ಗಣೇಶ್ ಶೆಟ್ಟಿಗಾರ್ ಅವರು ಪೈಪ್ ಕಾಂಪೋಸ್ಟ್ ತಯಾರಿಕೆ ಬಗ್ಗೆ ಮಾಹಿತಿ ನೀಡಿ ಗ್ರಾ.ಪಂ.ವ್ಯಾಪ್ತಿಯ ಪರಿಶಿಷ್ಟ ಜಾತಿ-ವರ್ಗಗಳ 112 ಮನೆಗಳನ್ನು ಗುರುತಿಸಿ ಪೈಪ್ ಕಾಂಪೋಸ್ಟ್ ತಯಾರಿಕಾ ಘಟಕ ನಿರ್ಮಿಸಲಾಗುತ್ತಿದೆ. ಈಗಾಗಲೇ ಪ್ರತೀ ಮನೆಗೆ ಪೈಪ್ ವಿತರಿಸಲಾಗಿದೆ ಎಂದು ಹೇಳಿದರು. ಗ್ರಾ.ಪಂ.ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರು, ಗ್ರಾ.ಪಂ.ಸದಸ್ಯರಾದ ಪ್ರಶಾಂತ್ ಕೋಟ್ಯಾನ್, ಜಯಶ್ರೀ, ಹೇಮಾವತಿ, ಸುನಂದ, ಗಿರಿಜ, ಮೂಡುಪಡುಕೋಡಿ ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ವಿಲ್ಮ ಮೇರಿ ಡಿಸೋಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಗೌಡ, ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಾಮದಪದವು ಸ.ಪ್ರ.ದ.ಕಾಲೇಜು ಎನ್ನೆಸ್ಸೆಸ್ ಘಟಕ ವಿದ್ಯಾರ್ಥಿಗಳು, ಸ್ಥಳೀಯ ತು.ರ.ವೇ.ಘಟಕ ಅಧ್ಯಕ್ಷ ಗಣೇಶ್ ಶೆಟ್ಟಿ, ಎರ್ಮೆನಾಡು ವೈಎಫ್‍ಸಿ ಸಂಘದ ಅಧ್ಯಕ್ಷ ಲೋಕೇಶ್, ದಲಿತ ಸಂಘರ್ಷ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಸ್.ಅಬ್ದುಲ್ ರಹಿಮಾನ್ ಅವರು ಸ್ವಾಗತಿಸಿ, ವಂದಿಸಿದರು.
ಇರ್ವತ್ತೂರು ಗ್ರಾ.ಪಂ.ವ್ಯಾಪ್ತಿಯ ಇರ್ವತ್ತೂರು ಮತ್ತು ಮೂಡುಪಡುಕೋಡಿ ಗ್ರಾಮಗಳ ಇರ್ವತ್ತೂರು ಬಿಎಸ್ ನಗರ, ಪಂಜೋಡಿ, ಬಲ್ಯಾರ್‍ಬೆಟ್ಟು, ಕಲ್ಲಡ್ಕ, ದೊಡ್ಡಕೆರೆ, ಮೂಡುಪಡುಕೋಡಿ, ಎರ್ಮೆನಾಡು, ಬಂಗೇರಕೆರೆಗಳ ಪರಿಶಿಷ್ಟ ಜಾತಿ-ಪಂಗಡಗಳ ಕಾಲನಿಯಲ್ಲಿ ಪೈಪ್ ಕಾಂಪೋಸ್ಟ್ ತಯಾರಿಕಾ ಘಟಕ ನಿರ್ಮಿಸಲಾಯಿತು.

ಏನಿದು ಪೈಪ್ ಕಾಂಪೋಸ್ಟ್ ?
ಮನೆ, ಶಾಲೆ, ಅಂಗನವಾಡಿ, ಕಛೇರಿಗಳ ಆವರಣದಲ್ಲಿ ಪೈಪ್ ಅಳವಡಿಸಬಹುದು. ಒಂದೂವರೆ ಅಡಿ ಆಳದಲ್ಲಿ 6 ಇಂಚು ವ್ಯಾಸ, 6 ಅಡಿ ಎತ್ತರದ ಸಿಮೆಂಟ್/ಮಣ್ಣಿನ ಪೈಪ್‍ನ್ನು ನೆಡುವುದು. ಪ್ಲಾಸ್ಟಿಕ್ ಹೊರತು ಪಡಿಸಿ ಭೂಮಿಯಲ್ಲಿ ಕರಗುವ ಯಾವುದೇ ವಸ್ತುಗಳನ್ನು ಹಾಕಬಹುದು. ಕಸ ಹಾಕುವ ಮೊದಲು 1ಕೆ.ಜಿ. ಬೆಲ್ಲ ಮತ್ತು ಸೆಗಣಿ ನೀರನ್ನು ಹಾಕಬೇಕು. ವಾರಕ್ಕೊಮ್ಮೆ ಅರ್ಧ ಲೀ. ನೀರು, ಒಂದು ಹಿಡಿ ಮಣ್ಣು ಹಾಕುವುದು. ಪೈಪ್‍ನ ಮೇಲ್ಭಾಗ ಮುಚ್ಚುವುದು. ಮೂರು ತಿಂಗಳ ಬಳಿಕ ಫಲವತ್ತಾದ ಸಾವಯವ ಗೊಬ್ಬರ ಲಭ್ಯ. ಕೇವಲ 350 ರೂ. ವೆಚ್ಚದ ಸರಳ ವಿಧಾನ. ಚಿಕ್ಕಪುಟ್ಟ ಕೃಷಿ ಕಾರ್ಯಗಳಿಗೆ ಉಪಯೋಗ. ಈಗಾಗಲೇ ಪ್ರತೀ ಗ್ರಾ.ಪಂ.ಕಛೇರಿ ಆವರಣದಲ್ಲಿ ತಯಾರಿಕಾ ಘಟಕ ನಿರ್ಮಿಸಲಾಗಿದ್ದು ಗ್ರಾ.ಪಂ.ನ ಪ್ರತೀ ಮನೆಗಳಲ್ಲಿ ನಿರ್ಮಿಸುವ ಯೋಜನೆ ಇದೆ.

By suddi9

Leave a Reply

Your email address will not be published. Required fields are marked *