ಬಂಟ್ವಾಳ; ಎಲ್ಲಾ ಇಲಾಖೆಗಳಲ್ಲಿ ಹೆಚ್ಚುತ್ತಿರುವ ಕಾರ್ಯದೊತ್ತಡಗಳ ನಡುವೆಯೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕಾದುದು ಸರ್ಕಾರಿ ನೌಕರರ ಜವಬ್ದಾರಿ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ಆಶ್ರಯದಲ್ಲಿ ಬಿ.ಸಿ.ರೋಡಿನ ಲಯನ್ಸ್ ಸೇವಾಮಂದಿರದಲ್ಲಿ ಭಾನುವಾರ ಜರಗಿದ ನಿವೃತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನೆ, ಮಾಹಿತಿ ಹಕ್ಕು ಸಂವಾದ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರು ಸಂಘಟಿತರಾಗಿದ್ದಾಗ ಮಾತ್ರ ಹೆಚ್ಚು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದ ಅವರು, ತಮ್ಮ ಶ್ರೇಯೋಭಿವೃದ್ದಿಗಾಗಿ ರೂಪಿಸಿಕೊಂಡಿರುವ ಸಂಘವನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ದಿ ಪಡಿಸಲು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ರವರು ಮಾತನಾಡಿ, ಸಂಘಟಿತ ಹೋರಾಟಕ್ಕೆ ಸಂಘ ಪ್ರೇರಣೆಯಾಗಬೇಕಿದ್ದು, ಜನಪ್ರತಿನಿಧಿಗಳು ಹಾಗೂ ಜನರ ನಡುವೆ ಅಧಿಕಾರಿಗಳು ಕಾಳಜಿಯಿಂದ ಕಾರ್ಯನಿರ್ವಹಿಸುವ ಕೊಂಡಿಯಾಗಬೇಕಿದೆ ಎಂದರು.
ಪೋಲೀಸ್ ಸಬ್ಇನ್ಸ್ಪೆಕ್ಟರ್ ರಕ್ಷಿತ್ ಎ.ಕೆ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ರೋಹಿನಾಥ, ಸುಬ್ರಹ್ಮಣ್ಯ ಎನ್.ಆರ್, ಸುನಂದ ಕೆ.ಪಿ, ಹರಿಪ್ರಸಾದ್ ಶೆಟ್ಟಿ, ಖಜಾಂಜಿ ಜನಾರ್ಧನ್ ವೇದಿಕೆಯಲ್ಲಿಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಉಮಾನಾಥ ರೈ ಸ್ವಾಗತಿಸಿದರು. ರಾಜ್ಯಪರಿಷತ್ ಕಾರ್ಯದರ್ಶಿ ಆರ್.ನಾಗೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಉದ್ಘಾಟನಾ ಸಮಾರಂಭಕ್ಕೆ ಮುನ್ನ ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಮಾಹಿತಿ ಹಕ್ಕು ಕುರಿತಾಗಿ ಮಾಹಿತಿ ನೀಡಿದರು.
ನಿವೃತ್ತ ಶಿಕ್ಷಕ ಸೇಸಪ್ಪ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ರಮೇಶ ನಾಯಕ್ ರಾಯಿ ವಂದಿಸಿದರು. ಸಮಾರಂಭದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದು ನಿವೃತ್ತರಾದ ವಿವಿಧ ಇಲಾಖೆಗಳ ಸರ್ಕಾರಿ ನೌಕರರನ್ನು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು