ಬಂಟ್ವಾಳ : ಸಾರ್ವಜನಿಕರ ನಿರಂತರ ಹೋರಾಟದ ಪರಿಣಾಮ ಕೊನೆಗೂ ಡೀಸಿ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡ ಹಿನ್ನಲೆಯಲ್ಲಿ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಪಾಣೆಮಂಗಳೂರು ನೇತ್ರಾವತಿ ಸೇತುವೆ ಅಡಿಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಸುವುದನ್ನು ನಿಷೇಧಿಸಿ ಹೈಕೋರ್ಟ್ ನೀಡಿರುವ ಆದೇಶವನ್ನು ಎತ್ತಿ ಹಿಡಿದು ಶುಕ್ರವಾರ ನಡಾವಳಿ ಜಾರಿಗೊಳಿಸಿದ್ದಾರೆ.

ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿ ಸೇತುವೆಗಳ ಅಡಿಭಾಗದಲ್ಲಿ ರಾಜ್ಯ ಹೈಕೋರ್ಟ್ ಆದೇಶ ಉಲ್ಲಂಘಿಸಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಪ್ರದೇಶಗಳಿಗೆ ಗುರುವಾರ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ ತಕ್ಷಣದಿಂದಲೇ ಹೈಕೋರ್ಟ್ ಆದೇಶ ಪಾಲಿಸಿ ಮರಳುಗಾರಿಕೆಗೆ ಬಳಸುತ್ತಿರುವ ಯಂತ್ರ ಹಾಗೂ ದೋಣಿಗಳನ್ನು ವಶಪಡಿಸಿಕೊಳ್ಳುವಂತೆ ತಾಲೂಕು ತಹಶೀಲ್ದಾರ್ಗೆ ಸೂಚನೆ ನೀಡಿ ತೆರಳಿದ್ದರು. ಈ ಹಿನ್ನಲೆಯಲ್ಲಿ ಶುಕ್ರವಾರ ತಹಶೀಲ್ದಾರ್ ಈ ಆದೇಶ ಹೊರಡಿಸಿದ್ದಾರೆ.
ಪಾಣೆಮಂಗಳೂರು ನೇತ್ರಾವತಿ ಸೇತುವೆಗಳ ಪಿಲ್ಲರ್ ಅಢಿಬಾಗದಲ್ಲೇ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದರಿಂದ ಸೇತುವೆಯ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದೆ ಎಂಬ ಸಾರ್ವಜನಕ ಹಿತಾಸಕ್ತಿ ದಾವೆಯನ್ನು ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್ ಸೇತುವೆಗಳ ಒಂದು ಕಿ ಮೀ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸುವಂತಿಲ್ಲ ಎಂದು 2009-10 ರಲ್ಲೇ ಆದೇಶ ನೀಡಿತ್ತು. ಆದರೆ ಆ ಬಳಿಕವೂ ಮರಳು ಮಾಫಿಯಾಗಳು ನ್ಯಾಯಾಂಗ ನಿಂದನೆ ನಡೆಸುತ್ತಾ ವಿವಿಧ ಪ್ರಭಾವಗಳನ್ನು ಬಳಸಿ ಇಲ್ಲಿ ನಿರಂತರ ಅಕ್ರಮ ಮರಳುಗಾರಿಕೆಯನ್ನು ನಡೆಸುತ್ತಾ ಬರುತ್ತಿತ್ತು. ಇಲ್ಲಿನ ಅಕ್ರಮ ಮರಳುಗಾರಿಕೆ ಸ್ಥಳೀಯ ಜನರ ಪಾಲಿಗೆ ತೀವ್ರ ತೊಂದರೆ ನೀಡುತ್ತಿತ್ತು. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಗಳೂರು ಆಯುಕ್ತರು, ತಾಲೂಕು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಕೆಲವೊಂದು ಕಣ್ಣು ಕಟ್ಟಿನ ದಾಳಿ ನಡೆಸುತ್ತಿದ್ದ ತಹಶೀಲ್ದಾರ್ ಅವರು ಒಂದೆರಡು ಲಾರಿಗಳನ್ನು ವಶಪಡಿಸಿ ದಂಡ ವಿಧಿಸುವ ಮೂಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುತ್ತಿದ್ದರು.
ಆದರೆ ಇದೀಗ ಇಲ್ಲಿನ ಮರಳು ಮಾಫಿಯಾಗಳ ಬಗ್ಗೆ ತೀವ್ರ ಆಕ್ರೋಶಿತರಾಗಿರುವ ಸ್ಥಳೀಯ ಸಾರ್ವಜನಿಕರು ಡೀಸಿ ಅವರಿಗೆ ದೂರುಕೊಂಡಿದ್ದರು. ಇದರಿಂದ ಗುರುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಇಬ್ರಾಹಿಂ ಅವರು ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ತಾಲೂಕು ತಹಶೀಲ್ದಾರ್ ಅವರನ್ನೇ ತೀವ್ರ ತರಾಟೆಗೆಳೆದ ಡೀಸಿ ಇಬ್ರಾಹಿಂ ಅವರು ತಕ್ಷಣ ಹೈಕೋರ್ಟ್ ಆದೇಶದ ಪಾಲನೆಯಾಗಬೇಕು. ಈ ಹಿನ್ನಲೆಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವಾಹನಗಳು ಹಾಗೂ ಯಂತ್ರಗಳನ್ನು ಜಪ್ತಿ ಮಾಡಬೇಕು. ಅಕ್ರಮ ಮರಳು ಮಾಫಿಯಾಗಳ ಮೇಲೆ ನ್ಯಾಯಾಂಗ ನಿಂದನೆಯಂತಹ ಗಂಭೀರ ಪ್ರಕರಣಗಳಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿದ್ದರು.
ರಾಜ್ಯ ಹೈಕೋರ್ಟ್ ರಿಟ್ ಪಿಟಿಷನ್ ನಂ 3344/2010(ಜಿಎಂ-ಎಂಎಂಎಸ್) ಮತ್ತು 32376-32377-2009 (ಜಿಎಂ-ಎಂಎಂಎಸ್-ಡಿಬಿ) ದಿನಾಂಕ 31-08-2010 ರಂತೆ ತಾಲೂಕಿನ ಪಾಣೆಮಂಗಳೂರು ಹಾಗೂ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇತ್ರಾವತಿ ನದಿ ಸೇತುವೆಯ ಸುತ್ತಮುತ್ತಲಿನ ಒಂದು ಕಿ ಮೀ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡುವುದು, ಮರಳು ಶೇಖರಿಸುವುದು, ದೋಣಿ ಮತ್ತಿತರ ವಾಹನಗಳ ಮೂಲಕ ಮರಳು ಸಾಗಾಟ ಇತ್ಯಾದಿ ನಡೆಸುವುದನ್ನು ಕ್ರಿಮಿನಲ್ ಪ್ರೊಸೀಡ್ ಕೋಡ್ನ ಸೆಕ್ಷನ್ 133 ರ ಮೇರೆಗೆ ನಿಷೇಧಿಸಲಾಗಿದೆ ಎಂಬ ಆದೇಶವನ್ನು ಗುರುವಾರ ನಡವಳಿ ಪ್ರಕಟಿಸುವ ಮೂಲಕ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಿ ಶುಕ್ರವಾರ ಪ್ರಕಟಣೆ ಹೊರಡಿಸಿದ್ದಾರೆ.