ಬಂಟ್ವಾಳ; ನಾವೂರು ಗ್ರಾಮದ ನೇತ್ರಾವತಿ ನದಿಯಲ್ಲಿ ಯುವಕ ಮುಳುಗಿ ಮೃತಪಟ್ಟ ಪ್ರಕರಣ ಕೊಲೆಯಾಗಿ ತಿರುವು ಪಡೆದುಕೊಂಡಿದ್ದು, ಈ ಸಂಬಂಧ ಐವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೋಟಿ ಯಾನೆ ಹರೀಶ(45), ಹೇಮಚಂದ್ರ ಆಲಿಯಾಸ್ ಗುರು(30), ನೀಲಪ್ಪ(55) ಹಾಗೂ ಆತನ ಈರ್ವರು ಮಕ್ಕಳಾದ ವಸಂತ(26) ಹಾಗೂ ರಮೇಶ್(24) ಎಂದು ಗುರುತಿಸಲಾಗಿದೆ.

ಘಟನೆ ವಿವರ;
ನಾವೂರು ಗ್ರಾಮದ ನೇತ್ರಾವತಿ ನದಿಯಲ್ಲಿ ಶನಿವಾರ ರಾತ್ರಿ ಸ್ಥಳೀಯ ನಿವಾಸಿ ಸುರೇಶ (38) ನ ಮೃತದೇಹ ಪತ್ತೆಯಾಗಿತ್ತು. ಸುರೇಶ್ ಕೆಲಸ ಮುಗಿಸಿ ಮನೆ ಹೋಗುತ್ತಿದ್ದಾಗ ನದಿ ನೀರಿಗೆ ಇಳಿದಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ದೂರುದಾಖಲಾಗಿತ್ತು. ಆದರೆ ಈ ಬಗ್ಗೆ ಸ್ಥಳೀಯವಾಗಿ ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಸಂಶಯಾಸ್ಪದ ಪ್ರಕರಣವನ್ನಾಗಿ ದಾಖಲಿಸಿ, ತನಿಖೆ ಚುರುಕು ಗೊಳಿಸಿದ್ದರು.

ನಾವೂರು ಗ್ರಾಮದ ಮನೆಯೊಂದರಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಆರೋಪಿಗಳು ಸಹಿತ ಸುರೇಶ ಜೊತೆಯಾಗಿ ಪಾಲ್ಗೊಂಡಿದ್ದು, ಸುಮಾರು 12 ಗಂಟೆಯ ಸುಮಾರಿಗೆ ಕುಡಿದ ಮತ್ತಿನಲ್ಲಿ ನದಿಕಿನಾರೆಯತ್ತ ಬಂದಿದ್ದರು. ಈ ಸಂದರ್ಭದಲ್ಲಿ ಆರೋಪಿಗಳ ಪೈಕಿ ಹರೀಶ ಯಾನೆ ಕೋಟಿ ಹಾಗೂ ಸುರೇಶನ ಮಧ್ಯೆ ಕ್ಷುಲ್ಲಕ ವಿಚಾರದಲ್ಲಿ ಜಗಳ ನಡೆದಿದ್ದು, ಈ ವೇಳೆ ಕುಪಿತನಾದ ಕೋಟಿ ಯಾನೆ ಹರೀಶ ಸುರೇಶನನ್ನು ನದಿ ನೀರಿನಲ್ಲಿ ಮುಳುಗಿಸಿ ಕೊಲೆಗೈದಿದ್ದಾನೆ. ಉಳಿದಂತೆ ಇತರ ಆರೋಪಿಗಳು ಈ ಕೃತ್ಯಕ್ಕೆ ಸಹಕರಿಸಿದ್ದಾರೆ.

ಕೊಲೆಗೈದ ಬಳಿಕ ಸುರೇಶನ ಮೃತದೇಹವನ್ನು ನದಿಕಿನಾರೆಯ ಮೇಲೆ ಎಳೆದು ತಂದು ಹಾಕಿ ಬಳಿಕ ವಾಪಾಸ್ ಕಾರ್ಯಕ್ರಮ ನಡೆಯುತ್ತಿದ್ದ ಮನೆಗೆ ತೆರಳಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ. ಆರಂಭಿಕ ಹಂತದಲ್ಲಿ ಆರೋಪಿಗಳ ಪೈಕಿ ಹರೀಶ ಯಾನೆ ಕೋಟಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಮೃತ ಸುರೇಶನ ಪತ್ನಿ ತನ್ನ ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತನ್ನ ಗಂಡನ ಸ್ನೇಹಿತರೇ ಕೊಲೆಗೈದಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬಂಟ್ವಾಳ ಉಪವಿಭಾಗದ ಎಎಸ್ಪಿ ರಾಹುಲ್ ಕುಮಾರ್ ಅವರ ಮಾರ್ಗದರ್ಶನದಂತೆ ಸಿಐ ಕೆ.ಯು ಬೆಳ್ಳಿಯಪ್ಪ ನೇತೃತ್ವದಲ್ಲಿ ಎಸ್ಐ ರಕ್ಷಿತ್ ಮತ್ತವರ ತಂಡ ತನಿಖೆಯನ್ನು ಕೈಗೆತ್ತಿಕೊಂಡು ಘಟನೆ ನಡೆದ 48 ಗಂಟೆಗಳೋಳಗೆ ಪ್ರಕರಣದ ಹಿನ್ನೆಲೆಯನ್ನು ಬೇಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದ್ದು, ಆರೋಪಿಗಳ ಪೈಕಿ ಕೋಟಿ ಯಾನೆ ಹರೀಶ ಈ ಹಿಂದೆ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಪಾಲ್ಗೊಂಡಿರುವುದು ಗೊತ್ತಾಗಿದೆ. ಬಂಧಿತ ಆರೋಪಿಗಳನ್ನು ಮಂಗಳವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ

By suddi9

Leave a Reply

Your email address will not be published. Required fields are marked *