ಒಳ್ಳೆಯ ಭಾವನೆಗಳಿಂದ ಸತ್ಕರ್ಮದ ಫಲಾನುಭವ : ರಾಮದಾಸ ಉಪಾಧ್ಯಾಯ
ಮುಂಬಯಿ: ದೈವಾನುಗ್ರಹವಿಲ್ಲದ ಬದುಕು ಶೂನ್ಯವಾಗಿರುತ್ತದೆ. ಆದುದರಿಂದ ಮಾನವರಲ್ಲಿ ಒಳ್ಳೆಯ ಭಾವನೆಗಳು ಮೂಡಿದಾಗ ಮಾತ್ರ ಸತ್ಕರ್ಮದ ಫಲಾನುಭವ ಫಲಿಸುವುದು. ಇದಕ್ಕೆಲ್ಲಾ ಶ್ರೀಕೃಷ್ಣ ದೇವರ ಸಾನಿಧ್ಯ ಅಭಿವೃದ್ಧಿ, ಪುನರ್‍ಪ್ರತಿಷ್ಠೆ ಅಗತ್ಯವಿದ್ದು, ಆ ಮೂಲಕ ಮನುಕುಲಕ್ಕೆ ಜ್ಞಾನಶಕ್ತಿ, ಸಮೃದ್ಧಿ, ನೆಮ್ಮದಿಯ ಬದುಕು ಒಲಿಯುವುದು. ಮತ್ತು ಸಾತ್ವಿಕವಾದ ಸನ್ಮಾರ್ಗದಿಂದ ಸತ್ಪಲ ಪ್ರಾಪ್ತಿಯಾಗುವುದು. ಈ ಭೂಮಿಯಲ್ಲಿನ ಪ್ರತೀಯೋಂದು ಸೊತ್ತುವಸ್ತುಗಳು ದೇವರದ್ದಾಗಿದ್ದು ಅದನ್ನು ನಮ್ಮದು ಎಂದರೆ ತಪ್ಪಾಗಿ ಅಪತ್ತು ಎದುರಾಗಬಲ್ಲದು. ಇಂದು ವಿಜಯದಶಮಿ ಸುದಿನವಾಗಿದ್ದು, ಅಂತೆಯೇ ದ್ವಾರಕೆಯಿಂದ ಶ್ರೀಕೃಷ್ಣರನ್ನು ತಂದು ಪ್ರತಿಷ್ಠಾಪಿಸಿದ ಶುಭಾವಸರವೂ ಹೌದು. ಆದುದರಿಂದಲೇ ಸರ್ವರ ವಿಘ್ನಗಳು
ನಿವಾರಣೆಗೊಳ್ಳುವಂತೆ ಪ್ರಾರ್ಥಿಸಿ , ಶ್ರೀ ಮಧ್ವಾಚಾರ್ಯರ ಜಯಂತಿಯ ಶುಭಾವಸರದಲ್ಲಿಮಹಾನಗರದಲ್ಲಿ ಸದ್ಭಕ್ತರ ದರ್ಶನಕ್ಕಾಗಿ ಶಿಲಾಮಯವಾಗಿ ನಿರ್ಮಿಸಲುದ್ದೇಶಿಸಿದ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ ಎಂದು ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ರಾಮದಾಸ ಉಪಾಧ್ಯಾಯ ತಿಳಿಸಿದರು.

ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ ನೂತನವಾಗಿ ನಿರ್ಮಿಸಲಾಗುವ ಶಿಲಾಮಯ ಮಂದಿರಕ್ಕೆ ವಿವಿಧ ಧಾರ್ಮಿಕ ಪೂಜಾಧಿಗಳನ್ನು ನೆರವೇರಿಸಿ ಶಿಲಾನ್ಯಾಸ ನೆರೆವೇರಿಸಿ ಉಪಾಧ್ಯಾಯ ನುಡಿದರು. ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಸ್ಥಾನೀಯ ಸಮಿತಿ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಗೌರವ ಕಾರ್ಯದರ್ಶಿ ಅವಿನಾಶ್ ಶಾಸ್ತ್ರಿ, ಮಠದ ಶಾಖಾಧಿಕಾರಿಗಳಾದ ನಿರಂಜನ್ ಗೋಗ್ಟೆ, ಆಶಾ ಎ. ರಾವ್, ಆರ್ಕಿಟೆಕ್ ವಿನಯರಾಜ್ ಸುವರ್ಣ, ಧನರಾಜ್ ಪುತ್ರನ್, ಶೇಖರ್ ಸಾಲ್ಯಾನ್ ಸಾಂತಕ್ರೂಜ್ ಮತ್ತಿತರರು ಉಪಸ್ಥಿತರಿದ್ದು, ಮಠದ ವ್ಯವಸ್ಥಾಪಕ ಶ್ರೀಹರಿ ಭಟ್ ಸ್ವಾಗತಿಸಿ ವಂದಿಸಿದರು. 2016ನೇ ಜನವರಿ 04ರಂದು ನೂತನ ಮಂದಿರದಲ್ಲಿ ಶ್ರೀಕೃಷ್ಣ ದೇವರ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶ ನೆರವೇರಿಸಲಾಗುವುದು. ಆ ಪ್ರಯುಕ್ತ ಭಕ್ತಾಭಿಮಾನಿಗಳಿಗೆ ಬೆಳ್ಳಿ ಮತ್ತು ತಾಮ್ರದ ಕಲಶವನ್ನಿತ್ತು ಶ್ರೀದೇವರ ಸೇವೆಗೈಯಲು ಅವಕಾಶವಿದೆ. ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಅಂದು ಪಟ್ಟದ ದೇವರನ್ನೊಳಗೊಂಡು ಪೂಜಾಧಿಗಳನ್ನು ನೆರವೇರಿಸಿ ಮಹಾನಗರದಲ್ಲಿನ ಸಮಸ್ತ ಭಕ್ತಾಭಿಮಾನಿಗಳನ್ನು ಆಶೀರ್ವಚಿಸಲಿದ್ದಾರೆ. ಬಳಿಕ ಅದೇ ದಿನ ಸಂಜೆ 4.00 ಗಂಟೆಗೆ ಉಡುಪಿಯಲ್ಲಿ ಪರ್ಯಾಯಪೂರ್ವಭಾವಿ ಸಾಂಪ್ರದಾಯಿಕ ಪುರಪ್ರವೇಶಗೈದು ತಮ್ಮ ಐತಿಹಾಸಿಕ ಐದನೇ ಪರ್ಯಾಯ ಸರ್ವಜ್ಞ ಪೀಠಾರೋಹಣಕ್ಕೆ ಪೂರ್ವಭಾವಿ ಸಿದ್ಧತೆ ನಡೆಸುವರು ಎಂದು ಮಠದ ಶಾಖಾಧಿಕಾರಿ ಪ್ರಕಾಶ್ ಆಚಾರ್ಯ ರಾಮಕುಂಜ ತಿಳಿಸಿದ್ದಾರೆ.


