ಬಂಟ್ವಾಳ: ಜಿಲ್ಲಾಧಿಕಾರಿಗಳ ಆದೇಶದಂತೆ ಮಂಗಳೂರು ಅಬಕಾರಿ ಜಂಟಿ ಆಯುಕ್ತರು ಮತ್ತು ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪ ವಿಭಾಗ ಮತ್ತು ಬೆಳ್ತಂಗಡಿ ವಲಯ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ಬುಧವಾರ ದಿಢೀರ್ ಕಾರ್ಯಾಚರಣೆ ನಡೆಸಿದೆ.
ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗಡಿ ಭಾಗ ಸಹಿತ ಕೋಡೆಕಲ್ಲು , ಸೂಜಿಗುಡ್ಡೆ , ಆನೆಗುಂಡಿ, ಬಿದಿರುತಳ, ಜೇನುಕಲ್ಲು ಮತ್ತಿತರ ಪ್ರದೇಶಗಳಲ್ಲಿ ಗಾಂಜಾ ಮತ್ತು ಪಾಪಿ ಗಿಡಗಳನ್ನು ಆಕ್ರಮವಾಗಿ ಬೆಳೆಸುತ್ತಿರುವ ಬಂದಿದ್ದ ಮಾಹಿತಿ ಹಿನ್ನೆಲೆಯಲ್ಲಿ ಸಂಪೂರ್ಣ ಶೋಧ ಕಾರ್ಯ ನಡೆಸಲಾಗಿದೆ. ಈ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಯಾವುದೇ ರೀತಿಯ ಅಕ್ರಮ ಪತ್ತೆಯಾಗಿಲ್ಲ.
ಇಂತಹ ಅಕ್ರಮ ಗಾಂಜಾ ಮತ್ತು ಪಾಪಿ ಗಿಡಗಳನ್ನು ಬೆಳೆಸುವ ಆರೋಪಿಗಳ ವಿರುದ್ಧ ಇಲಾಖೆ ಕಟ್ಟೆಚ್ಚರ ವಹಿಸುತ್ತಿದ್ದು, ಎನ್‍ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಮಾದಕ ದ್ರವ್ಯ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಗಾಂಜಾ ಮತ್ತು ಪಾಪಿ ಗಿಡಗಳನ್ನು ಬೆಳೆಸುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಬಂಟ್ವಾಳ ಅಬಕಾರಿ ಉಪ ಅಧೀಕ್ಷಕರ ಕಛೇರಿ (08255-231595, 232726) ಬೆಳ್ತಂಗಡಿ ವಲಯ ಕಚೇರಿ(08256-234757) ಇವರಿಗೆ ಮಾಹಿತಿ ನೀಡುವಂತೆ ಇಲಾಖೆ ಪ್ರಕಟಣೆ ವಿನಂತಿಸಿದೆ.