ಕೃಷ್ಣರಾಜಪೇಟೆ. ಜೀವನಾನುಭವಗಳೇ ಕವಿತೆಯ ರೂಪವನ್ನು ಪಡೆದಾಗ ಮನಸ್ಸಿಗೆ ತೃಪ್ತಿ ದೊರೆಯುವ ಜೊತೆಗೆ ಸಮಾಜಮುಖಿಯಾದ ಕಾವ್ಯಗಳ ರಚನೆಗೆ ಹೆಚ್ಚಿನ ಪ್ರೇರೇಪಣೆ ಸಿಗುತ್ತದೆ ಎಂದು ಪ್ರಾಂಶುಪಾಲ ಡಾ.ಕೆ.ಸಿ.ಕೃಷ್ಣ ಅಭಿಪ್ರಾಯಪಟ್ಟರು.
ಅವರು ಇಂದು ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರತಿಭೆ ಅಂತಿಮ ಯಾಂತ್ರಿಕ ವಿಭಾಗದ ವಿದ್ಯಾರ್ಥಿ ಅಸ್ಲಂ ಸೈಯ್ಯದ್ ಶೇಖ್ ಅವರು ರಚಿಸಿರುವ “ತಪೋವನ” ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಬರೆದುದ್ದೆಲ್ಲಾ ಕಾವ್ಯವಾಗಿ ಕವಿತೆ ಹುಟ್ಟುವುದಿಲ್ಲ, ಹಾಗೆಯೇ ಜೀವನಾನುಭವಗಳನ್ನೇ ಕಾವ್ಯದ ರೂಪಕ್ಕೆ ತಂದು ಕವಿತೆಗಳನ್ನು ರಚಿಸಿದಾಗ ಹೆಸರು ಮತ್ತು ಕೀರ್ತಿ ಎರಡನ್ನೂ ಪಡೆದಿರುವ ಕವಿಗಳ ಉದಾಹರಣೆಯು ನಮ್ಮ ಮುಂದೆ ಸಾಕಷ್ಟಿರುವ್ಯದರಿಂದ ನಮ್ಮ ಕಾಲೇಜಿನ ಯುವಕವಿ ಕನ್ನಡದ ಪ್ರತಿಭೆ ಅಸ್ಲಂ ಸೈಯ್ಯದ್ ಶೇಖ್ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳು, ತಾಯಿಯ ಮಮತೆ, ಭ್ರಷ್ಠಾಚಾರದ ನಿರ್ಮೂಲನೆ, ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ ಕುರಿತು ರಚಿಸಿರುವ ಪದ್ಯಗಳು ಅರ್ಥಪೂರ್ಣವಾಗಿರುವ ಜೊತೆಗೆ ಅಪ್ಯಾಯಮಾನವಾಗಿ ಪ್ರಾಸಬದ್ಧವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಾಂಶುಪಾಲರು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಕವಿತೆಗಳನ್ನು ರಚಿಸಿ ಕವನಹ ಸಂಕಲನವನ್ನು ಹೊರತಂದಿದ್ದಾರೆ, ಇವರ ಸಾಮಾಜಿಕ ಕಳಕಳಿ, ಅನ್ಯಾಯದ ವಿರುದ್ಧ ಹೋರಾಟ ನಿರಂತರವಾಗಿ ಸಾಗಲಿ, ಅಸ್ಲಂ ಅವರ ಆದರ್ಶ ಗುಣಗಳು ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಕವನ ಸಂಕಲನವನ್ನು ಕುರಿತು ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕವಿ ಮಾರೇನಹಳ್ಳಿ ಲೋಕೇಶ್ ಕನ್ನಡ ಸಾರಸ್ವತಲೋಕಕ್ಕೆ ಯುವಕವಿಯೊಬ್ಬರು ಪಾದಾರ್ಪಣೆ ಮಾಡಿ ಪ್ರಥಮ ಪ್ರಯತ್ನದಲ್ಲಿಯೇ ಕನ್ನಡಿಗರು ಹಾಗೂ ಸಾಹಿತ್ಯ ಪ್ರೇಮಿಗಳ ಮನಗೆಲ್ಲುವ ಗಟ್ಟಿತನದ ಸತ್ವಗಳನ್ನು ಹೊಂದಿರುವ ಕವಿತೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಹಿತ್ಯ ಸಂಸ್ಕøತಿಯಿಂದ ದೂರವಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಸಂಸ್ಕøತಿಯ ಅಭಿರುಚಿಯನ್ನು ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕಲುಷಿತಗೊಂಡಿರುವ ಸಮಾಜವನ್ನು ಸರಿದಾರಿಗೆ ತರಲು, ಯುವಜನರ ಮನಸ್ಸನ್ನು ಪರವರ್ತನೆಯ ಹಾದಿಯಲ್ಲಿ ಕೊಂಡೊಯ್ಯಲು ಸಾಹಿತ್ಯ ಮತ್ತು ಕವಿಗೆಗಳು ದಾರಿ ದೀಪವಾಗಿವೆ. ಕವನಗಳು ಇಂಪಾದ ಹಾಡಿನ ರೂಪವನ್ನು ಪಡೆದಾಗ ಕನ್ನಡಿಗರ ಮನ, ಮನೆಯನ್ನು ತಲುಪಿ ನೂರ್ಕಾಲ ಶಾಶ್ವತವಾದ ಸ್ಥಾನವನ್ನು ಪಡೆಯುವಂತೆ, ಅಸ್ಲಂಶೇಖ್ ಅವರು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ತತ್ವಪದಗಳ ಗಾಯಕರಾಗಿ ಕಾಲೇಜಿನ ವಿದ್ಯಾರ್ಥಿಗಳ ಮನ ಗೆದ್ದಿದ್ದಾರೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕವನ ಸಂಕಲನವನ್ನು ಹೊರ ತರುತ್ತಿರುವುದು ಎಲ್ಲರೂ ಮೆಚ್ಚುವ ಸಂಗತಿಯಾಗಿದೆ ಎಂದು ಅಭಿನಂದಿಸಿದರು.
ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಟಿ.ಲೋಕೇಶ್ ಕನ್ನಡ ಭಾಷೆಯ ಮಹತ್ವ ಮತ್ತು ಇತಿಹಾಸವನ್ನು ಕುರಿತು ಮಾತನಾಡಿ ಕನ್ನಡದ ನೆಲ-ಜಲ ಹಾಗೂ ಭಾಷೆಗೆ ಪರ ಭಾಷಿಕರಿಂದ ಸಂಕಷ್ಠವು ಎದುರಾದ ಸಂದರ್ಭದಲ್ಲಿ ಕನ್ನಡಿಗರಾದ ನಾವು ಯಾವುದೇ ಹೋರಾಟಕ್ಕೆ ಸದಾ ಸಿದ್ಧರಾಗಿರಬೇಕು. ಕನ್ನಡಿಗರಾದ ನಾವು ಕನ್ನಡ ಸಾರಸ್ವತಲೋಕಕ್ಕೆ ಕೊಡುಗೆ ನೀಡಿ 8 ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿರುವ ಮಹನೀಯರ ಜೀವನದ ಆದರ್ಶಗಳನ್ನು ಪಾಲಿಸಬೇಕು. ಕನ್ನಡ ನಾಡಿನಲ್ಲಿ ವಾಸಿಸುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ನಿಷ್ಠೆಯಿಂದ ಮಾಢಬೇಕು. ಕನ್ನಡದ ಕೆಲಸಕ್ಕಾಗಿ ತನು, ಮನ, ಧನ ಸೇರಿದಂತೆ ಸರ್ವಸ್ವವನ್ನೂ ಸಮರ್ಪಣೆ ಮಾಡುವ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಬೇಕು ಎಂದು ಲೋಕೇಶ್ ಕರೆ ನೀಡಿದರು.
ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಮತ್ತು ಕವಿಗಳಾದ ಕೆ.ಸಿ.ಮಂಜುನಾಥ ಸಮಾರಂಭದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಢಳಿತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಪತ್ರಕರ್ತ ಕೆ.ಆರ್.ನೀಲಕಂಠ ಅವರನ್ನು ಕಾಲೇಜಿನ ವತಿಯಿಂದ ಪ್ರಾಂಶುಪಾಲ ಡಾ.ಕೆ.ಸಿ.ಕೃಷ್ಣ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ.ರವೀಂದ್ರ, ಪ್ರೊ.ಜಿ.ವಸಂತ್, ರುದ್ರಪ್ಪ, ಪುಷ್ಪಾವತಿ, ವೆಂಕಟೇಶಪ್ರಸಾದ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಗೀತೆ ಗಾಯನ, ಚಿತ್ರಗೀತೆಗಳು, ಭಾವಗೀತೆಗಳ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಉಪನ್ಯಾಸಕರಾದ ಡಿಂಕ ಮಹೇಶ್ ಸ್ವಾಗತಿಸಿದರು, ವೆಂಕಟೇಶಪ್ರಸಾದ್ ವಂದಿಸಿದರು, ರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾವತಿ ಚುಟುಕುಗಳನ್ನು ವಾಚಿಸಿದರು.



