ಬಂಟ್ವಾಳ: ಮಡಿಕೇರಿ ಗಲಭೆಗೆ ಸಂಬಂಧಿಸಿದಂತೆ ಎಸ್ಡಿಪಿಐ ಸಂಘಟನೆ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನಾ ಸಭೆಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದ ಘಟನೆ ಗುರುವಾಋ ಸಂಜೆ ಬಿ.ಸಿ.ರೋಡಿನಲ್ಲಿ ನಡೆದಿದೆ.
ಗಲಭೆಯಿಂದ ಬಿ.ಸಿ.ರೋಡು ಪರಿಸರದಲ್ಲಿ ಆತಂಕದ ಸ್ಥಿತಿ ನಿರ್ಮಾಣಗೊಂಡಿದ್ದು, ಈ ವೇಳೆ ಗುಂಪು ಚದುರಿಸಲು ಪೊಲೀಸರು ಪೊಲೀಸರು ಲಾಠ ಪ್ರಹಾರ ನಡೆಸಿದ್ದಾರೆ. ಘಟನೆಯಿಂದ ಬಿ.ಸಿ.ರೋಡಿನ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದ್ದು, ಉದ್ವಿಗ್ನತೆ ಮುಂದುವರಿದಿದೆ.
ಘಟನೆ ವಿವರ;
ಮಡಿಕೇರಿಯಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದ್ದ ಗಲಭೆ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಎಸ್ಡಿಪಿಐ ಸಂಘಟನೆ ಪ್ರತಿಭಟನಾ ಸಭೆ ಆಯೋಜಿಸಿತ್ತು. ಈ ವೇಳೆ ಸಭೆಯಲ್ಲಿದ್ದವರಿಗೆ ಹೊರಗಿನಿಂದ ಕಲ್ಲು ತೂರಾಟ ನಡೆದಿದೆ. ಇದೇ ವೇಳೆ ಪೊಲೀಸರು ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತೆರಳುವುದನ್ನು ತಡೆಯಲು ಸಭೆಯನ್ನು ನಿಲ್ಲಿಸುವಂತೆ ಪ್ರತಿಭಟನಾ ಕಾರರ ಮನವೊಲಿಸಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪ್ರತಿಭಟನಾ ಕಾರರೂ ಕಲ್ಲು ತೂರಾಟಕ್ಕೆ ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು, ಗುಂಪುಚದುರಿಸಲು ಲಾಠಿ ಪ್ರಹಾರ ನಡೆಸಿದರು. ಕಲ್ಲು ತೂರಾಟದ ವೇಳೆ ಬಂಟ್ವಾಳ ವೃತ್ತನಿರೀಕ್ಷಕ ಬೆಳ್ಳಿಯಪ್ಪ ಅವರ ತಲೆಗೆ ಗಾಯಗಳಾಗಿದ್ದು, ಅಂಗಡಿಯೊಂದರ ಗಾಜಿಗೆ ಹಾನಿಯಾಗಿದೆ.
ಸ್ಥಳಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ, ಎಎಸ್ಪಿ ರಾಹುಲ್ ಕುಮಾರ್, ಪುತ್ತೂರು ಸಿಐ ಮಹೇಶ್ ಪ್ರಸಾದ್, ಠಾಣಾಧಿಕಾರಿ ನಂದಕುಮಾರ್, ರಕ್ಷಿತ್ ಗೌಡ ಆಗಮಿಸಿದ್ದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.