ಮೂಡುಬಿದರೆ: ಇಲ್ಲಿನ ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್, ಶ್ರೀ ಮಹಾವೀರ ಕಾಲೇಜು, ಮಂಗಳೂರಿನ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಂ.ಕೆ.ಅನಂತರಾಜ್ ಕಾಲೇಜ್ ಆಫ್ ಫಿಝಿಕಲ್ ಎಜುಕೇಶನ್ ಮೂಡುಬಿದರೆ ಇವುಗಳ ಸಹಯೋಗದಲ್ಲಿ ನ.28 ಮತ್ತು 29ರಂದು ಶ್ರೀ ಮಹಾವೀರ ಕಾಲೇಜಿನ ಅಡಿಟೋರಿಯಂನಲ್ಲಿ ರಾಷ್ಟ್ರಮಟ್ಟದ 3ನೇ ಕರಾಟೆ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಎಂ.ಕೆ ಅನಂತರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಧನಂಜಯ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ವತಿಯಿಂದ ಜಿಲ್ಲೆಯ 52 ಶಾಲೆಗಳಲ್ಲಿ ಸುಮಾರು 8,000 ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಅಲ್ಲದೆ ಈಗಾಗಲೇ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕರಾಟೆ ಪ್ರದರ್ಶನವನ್ನು ನೀಡಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಚಿವ ಕೆ. ಅಭಯಚಂದ್ರ ಜೈನ್ ಕರಾಟೆ ಚಾಂಪಿಯನ್ ಶಿಪ್ನ್ನು ಉದ್ಘಾಟಿಸಲಿದ್ದು, ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ವಾಲ್ಟರ್ ಸ್ಟೀಫನ್ ಮೆಂಡಿಸ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಫೆಡರೇಶನ್ನ ಅಧ್ಯಕ್ಷ ಸದಾನಂದ ಶೆಟ್ಟಿ, ಪಂಡಿತ್ ಹೆಲ್ತ್ ರೆಸಾರ್ಟ್ನ ಮಾಲಕ ಲಾಲ್ ಗೋಯಲ್, ಮತ್ತು ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ನ ಅಧ್ಯಕ್ಷ ಅಬುಲ್ ಆಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾಷ್ಟ್ರಮಟ್ಟದ ಈ ಕರಾಟೆ ಚಾಂಪಿಯನ್ಶಿಪ್ನಲ್ಲಿ ಪಂಜಾಬ್, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಕೇರಳ, ಮತ್ತು ಕರ್ನಾಟಕ ರಾಜ್ಯದಿಂದ ಒಟ್ಟು 1500 ಕ್ರೀಡಾಪಟುಗಳು ಭಾಗವಹಿಸಲಿದ್ದು, ಕಟ ಮತ್ತು ಕುಮಿಟಿ ವಿಭಾಗದಲ್ಲಿ ಈ ಕ್ರೀಡೆಯು ನಡೆಯಲಿದೆ. ವಿಜೇತ ತಂಡಗಳಿಗೆ ರೂ 10,000 ನಗದನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ನ ಅಧ್ಯಕ್ಷ ಅಬುಲ್ ಆಲ ಪುತ್ತಿಗೆ, ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ನ ಶಿಕ್ಷಕ ನದೀಮ್ ಮತ್ತು ಮಹಾವೀರ ಕಾಲೇಜಿನ ದೈಹಿಕ ಶಿಕ್ಷಕ ರಾಜ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.