ಬಂಟ್ವಾಳ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿವೆ ವಿನಃ ಬಡವರ ಪಾಲಿಗೆ ವರದಾನವಾಗಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರ ಪಾಲಿಗೆ ಆಶಾಕಿರಣವಾಗಿದೆ ಎಂದು ರಾಜ್ಯ ನಗರಾಭಿವೃದ್ದಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಬಿ.ಸಿ.ರೋಡಿನ ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದೇಶದ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ಮರಳಿಸಿ ಎಲ್ಲರಿಗೂ ಹಂಚುವ ಭರವಸೆ ನೀಡಿದ್ದರು. ಆದರೆ ದೇಶದ ಜನ ಕಾದ್ದದ್ದೇ ಬಂತು ಕಪ್ಪು ಹಣ ಬಂದಿಲ್ಲ, ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳನ್ನು ತೆರೆಯಿತೇ ವಿನಃ ಯಾವುದೇ ಹಣ ಖಾತೆಗೆ ಜಮಾವಣೆ ಗೊಂಡಿಲ್ಲ. ಬಿಜೆಪಿ ಸುಳ್ಳು ಘೋಷಣೆಗಳನ್ನೆ ನೀಡಿ ಅಧಿಕಾರ ವಹಿಸಿಕೊಂಡಿದೆ. ಆದರೆ ರಾಜ್ಯ ಸರ್ಕಾರ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ ಇಂತಹ ಕಾರ್ಯಕ್ರಮಗಳ ಪ್ರಚಾರ ಮಾಡುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರತಾಪ್ಚಂದ್ರ ಶೆಟ್ಟಿ ಮಾತನಾಡಿ ನಾನು ನನ್ನ ಅಧಿಕಾರವಧಿಯಲ್ಲಿ ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಿಲ್ಲ ಎಂಬ ಆರೋಪಗಳಿವೆ ಆದರೆ ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡುವ ಸಂಪ್ರದಾಯ ನಾನೇ ಪ್ರಾರಂಭಿಸಿದ್ದು. ಇದಕ್ಕಿಂತ ಮೊದಲು ಯಾವುದೇ ವಿಧಾನಪರಿಷತ್ ಸದಸ್ಯ ಗ್ರಾಮಗಳಿಘೆ ಭೇಟಿ ನೀಡಿರಲಿಲ್ಲ ಎಂದರು. ಪ್ರದೇಶಾಭಿವೃದ್ದಿ ನಿಧಿಯನ್ನು ಹಂತಹಂತವಾಗಿ ರೂಪಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇನೆ, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿರುವುದಕ್ಕೆ ಇಲ್ಲಿ ಶಾಸಕರಾಗಿರುವ ರಮಾನಾಥ ರೈಯವರೇ ಸಾಕ್ಷಿ ಎಂದರು. ವಿಧಾನಪರಿಷತ್ನಲ್ಲಿ ಸಕ್ರಿಯವಾಗಿರುವ 5 ಮಂದಿ ಶಾಸಕರ ಪೈಕಿ ನಾನು ಒರ್ವ ಎನ್ನುವ ಹೆಮ್ಮೆ ಇದೆ, ಚುನಾವಣೆಯಲ್ಲಿ ಗೆದ್ದು ಬಂದರೆ ಕಾರ್ಯಕರ್ತರ ನಂಬಿಕೆಗಳಿಗೆ ಚ್ಯುತಿಯಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕರ್ತರು ಪಕ್ಷದ ಆಧಾರ ಸ್ತಂಭ. ಪ್ರತಾಪ್ಚಂದ್ರ ಶೆಟ್ಟಿಯವರು ಪಕ್ಷದ ಹಿರಿಯ ಕಾರ್ಯಕರ್ತನಾಗಿ ನಿಷ್ಟೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಪ್ರತಾಪಚಂದ್ರ ಶೆಟ್ಟಿಯವರು ಎಂದೂ ಅಧಿಕಾರವನ್ನು ಅಪೇಕ್ಷೇ ಪಟ್ಟವರಲ್ಲ. ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷೇತರವಾಗಿ ಸ್ಪರ್ಧಿಸುವ ವ್ಯಕ್ತಿತ್ವ ಅವರದಲ್ಲ. ಅವರ ಗುಣದಲ್ಲಿ ಮತ್ಸರವಿಲ್ಲ ಎಂದು ಗುಣಗಾನ ಮಾಡಿದ ಅವರು ಪಕ್ಷದ ಚಿಹ್ನೆಯಡಿ ಸ್ಪಧರ್ಿಸುತ್ತಿರುವ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿದರು. ವೇದಿಕೆಯಲ್ಲಿ ಪಕ್ಷ ಪ್ರಮುಖರಾದ ಪಿಯೂಸ್ ರೊಡ್ರಿಗಸ್, ಬಿ.ಎಚ್.ಖಾದರ್, ಕೋಡಿಜಾಲ್ ಇಬ್ರಾಹಿಂ, ಮಮತಾಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮನಾಭ ರೈ, ಶಶಿಧರ ಹೆಗ್ಡೆ, ವಸಂತಿ ಚಂದಪ್ಪ, ಹೇಮನಾಥ ಶೆಟ್ಟಿ, ಸರಸ್ವತಿ ಕಾಮತ್ ಉಪಸ್ಥಿತರಿದ್ದರು.
ಪುರಸಭಾ ಸದಸ್ಯ ಸದಾಶಿವ ಬಂಗೇರಾ ಸ್ವಾಗತಿಸಿ, ಉಮೇಶ್ ನರಿಕೊಂಬಿ ವಂದಿಸಿದರು, ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.

