ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ತಿರುವು ರಸ್ತೆಯಲ್ಲಿ ಬುಧವಾರ ಮುಂಜಾನೆ ಮೂಡುಬಿದ್ರೆ ಕಡೆಗೆ ಹೋಗುತ್ತಿದ್ದ ಖಾಸಗಿ ವೋಲ್ವೊ ಬಸ್ ರಸ್ತೆ ಬದಿ ಉರುಳಿ ಬಿದ್ದ ಪರಿಣಾಮ ಸುಮಾರು 10ಕ್ಕೂ ಮಿಕ್ಕಿ ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಘಟನೆ ನಡೆದಿದೆ.
ಈ ಪೈಕಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದರೆ, ಉಳಿದಂತೆ ಡಿ.ಎನ್.ಪುಷ್ಪಾ, ಅನಿರುದ್ಧ್, ಸುನಿತಾ ಸ್ಟೀವನ್, ರತ್ನಾ, ಸುಲೋಚನಾ, ಅನಿರುದ್ಧ್ ದ್ವಾರಕಿನಾಥ್, ವಸಂತಿ ಎಂಬವರು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಂದೆಡೆ ಮಣಿಪಾಲ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೂಡಾ ಕೆಲವರನ್ನು ಕಳುಹಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

24-9
ಮೈಸೂರಿನಿಂದ ಮಂಗಳವಾರ ರಾತ್ರಿ ಹತ್ತೂವರೆ ಗಂಟೆಗೆ ಕುಂದಾಪುರಕ್ಕೆ ಹೊರಟಿದ್ದ ದುರ್ಗಾಂಬಾ ಖಾಸಗಿ ವೋಲ್ವೊ ಬಸ್ ಬಂಟ್ವಾಳ -ಮೂಡುಬಿದ್ರೆ ರಸ್ತೆ ಮೂಲಕ ಇಲ್ಲಿನ ಭಂಡಸಾಲೆ ಸಮೀಪದ ಸೋರ್ಣಾಡು ತಿರುವು ರಸ್ತೆಯಲ್ಲಿ ಬುಧವಾರ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇಲ್ಲಿನ ತಿರುವು ರಸ್ತೆಯಲ್ಲಿ ಮೂಡುಬಿದ್ರೆ ಕಡೆಗೆ ವೇಗವಾಗಿ ಹೋಗುತ್ತಿದ್ದ ಬಸ್ ಆರಂಭದಲ್ಲಿ ರಸ್ತೆಯ ಎಡಭಾಗದ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದು ಬಳಿಕ ನಿಧಾನವಾಗಿ ರಸ್ತೆಗೆ ಉರುಳಿ ಬಿದ್ದಿದೆ. ಈ ಬಸ್ಸಿನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರಿದ್ದು, ಅವರು ಮೂಡುಬಿದ್ರೆ, ಕಾರ್ಕಳ, ಉಡುಪಿ ಮತ್ತು ಕುಂದಾಪುರಕ್ಕೆ ಟಿಕೆಟ್ ಪಡೆದಿದ್ದರು ಎಂದು ಬಸ್ಸಿನ ಚಾಲಕ ಸುರೇಶ್ ಮೈಸೂರು ಇವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಸ್ಥಳೀಯ ಕೊಯಿಲ ಮೀನಿನ ವ್ಯಾಪಾರಿ ಅಬ್ದುಲ್ ರೆಹ್ಮಾನ್ ಎಂಬವರು ಗಮನಿಸಿ ಇತರರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕೊಯಿಲ ಮತ್ತು ಅರಳ ಹೂವಿನ ವ್ಯಾಪಾರಿಗಳಾದ ನವಾಝ್, ಖಲಂದರ್, ಸಿರಾಜ್, ಅಯ್ಯಪ್ಪ ವೃತಧಾರಿ ಕಾರ್ತಿಕ್, ಮಿಥುನ್ ಮತ್ತಿತರು ಧಾವಿಸಿ ಗಾಯಾಳುಗಳನ್ನು ಬಸ್ಸಿನ ಕಿಟಕಿ ಮೂಲಕ ಮೇಲೆತ್ತಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ. ಬಸ್ಸಿನ ಚಾಲಕ ಸಹಿತ ನಿರ್ವಾಹಕ ಸುರೇಶ್ ಯಾವುದೇ ಗಾಯವಿಲ್ಲದೆ ಪಾರಾಗಿದ್ದು, ಮೆಲ್ಕಾರ್ ಸಂಚಾರಿ ಠಾಣೆ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *