ಮೂಡುಬಿದಿರೆ ಸ್ವರಾಜ್ಯದ ಮೈದಾನದ ಬಳಿ ನಿರ್ಮಾಣವಾಗುತ್ತಿರುವ ಈಜುಕೊಳದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಮೂಡುಬಿದಿರೆಯಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಲು 9 ಎಕರೆ ಜಾಗವನ್ನು ಗುರುತಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು ಎಂದು ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.


ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಂಗಳೂರು ಪ್ರೀಮಿಯಂ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಚಾಂಪಿಯನ್ ಆಗಿ ಮೂಡಿ ಬಂದ ಬೆದ್ರ ಬುಲ್ಸ್ ಆಟಗಾರರಿಗೆ ಬುಧವಾರ ಸಮಾಜ ಮಂದಿರದಲ್ಲಿ ವಡೆದ ಅಭಿನಂದನಾ ಸಮಾರಂಭದಲ್ಲಿ ಆಟಗಾರರನ್ನು ಅಭಿನಂಧಿಸಿ ಸಾಧಕ ಆಟಗಾರರಿಗೆ ಡಾ. ಎಂ. ಮೋಹನ್ ಆಳ್ವ ಅವರು ವೈಯಕ್ತಿಕ ನೆಲೆಯಲ್ಲಿ ನಾಡಿದ ನಗದು ಬಹುಮಾನವನ್ನು ವಿತರಿಸಿ ಅವರು ಮಾತನಾಡಿದರು.
ಕ್ರೀಡಾ ಕ್ಷೇತ್ರದಲ್ಲಿ ಕಿಂಚಿತ್ ಸೇವೆ ಇರಲಿ ಎಂಬ ಭಾವನೆಯಿಂದ ಬೆದ್ರ ಬುಲ್ಸ್ ತಂಡವನ್ನು ಕಟ್ಟಿರುವ ಪ್ರಶಸ್ತಿ ಗಳಿಸುವ ಮೂಲಕ ಮೂಡುಬಿದಿರೆಯ ಹೆಸರು ಪ್ರಜ್ವಲಿಸಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿರುವ ಮೂಡುಬಿದಿರೆಯಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಬೇಕು. ಕ್ರೀಡಾ ಪಟುಗಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಕ್ರಿಕೆಟ್ ಟೀಂನಲ್ಲೂ ಆಡುವ ಶಕ್ತಿ ಮೂಡುಬಿದಿರೆಯ ಆಟಗಾರರಿಗೂ ಬರುದೆ ಎಂದರು.
ಬೆದ್ರ ಬುಲ್ಸ್ ತಂಡದ ವ್ಯವಸ್ಥಾಪಕ ಸಂದೀಪ್ ಭಂಡಾರಿ, ಸಹ ವ್ಯವಸ್ಥಾಪಕ ರಿತೇಶ್ ಭಟ್ಕಳ, ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರತ್ನಾಕರ ಸಿ ಮೊಯ್ಲಿ ಕಾರ್ಯಕ್ರಮ ನಿರ್ವಹಿಸಿದರು.