ಬಜ್ಪೆ: ಕಟೀಲು ಪರಿಸರದ   ವ್ಯಕ್ತಿಯೋರ್ವ ತನ್ನ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ 19ರ ಹರೆಯದ ಯುವತಿಯನ್ನು ನಿರಂತರ ಅತ್ಯಾಚಾರ ಎಸಗಿದ ಪರಿಣಾಮ ಆಕೆ ಇದೀಗ ಐದು ತಿಂಗಳ ಗರ್ಭ ಧರಿಸಿದ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರಗೈದ ಆರೋಪಿಯನ್ನು ಕಟೀಲು ನಿವಾಸಿ ಹರಿಶ್ಚಂದ್ರ ಭಟ್ ಯಾನೆ ಅಪ್ಪು ಭಟ್(56) ಎಂದು ಗುರುತಿಸಲಾಗಿದೆ.6 bajpe 1

ಯುವತಿ ಆರೋಪಿಯ ಮನೆಗೆ ಮೆನೆಕೆಲಸಕ್ಕೆಂದು ಹೋಗುತ್ತಿದ್ದು, ಈ ವೇಳೆ ಆಕೆಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ. ಈ ನಡುವೆ ಯುವತಿ ಈತನ ಹಿಂಸೆ ತಾಳಲಾರದೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದು, ಈ ವೇಳೆ ಆರೋಪಿ ಹರಿಶ್ಚಂದ್ರ ಯುವತಿಯನ್ನು ಬೆದರಿಸಿ ಮತ್ತೆ ಕೆಲಸಕ್ಕೆ ಬರುವಂತೆ ಒತ್ತಾಯಿಸಿ ಕರೆಸಿದ್ದ. ಇದಾದ ಬಳಿಕವೂ ಆರೋಪಿಯು ತನ್ನ ಚಾಳಿಯನ್ನು ಮುಂದುವರಿಸಿದ್ದರ ಫಲವಾಗಿ ಬಾಲಕಿ ಗರ್ಭ ಧರಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಕೊಂಚ ಬುದ್ಧಿಮಾಂದ್ಯ ಯುವತಿಯಾಗಿರುವುದರ ಫಲವಾಗಿ ಈತನ ಕೃತ್ಯ ಬಯಲಾಗಿರಲಿಲ್ಲ ಎಂದು ತಿಳಿದುಬಂದಿದೆ.
ಯುವತಿಗೆ ಅತ್ಯಾಚಾರ ಎಸಗಿದ ಬಳಿಕ ಈ ವಿಚಾರವನ್ನು ಯಾರಲ್ಲಾದರೂ ಬಾಯ್ಬಿಟ್ಟರೆ ಕೊಲ್ಲುವುದಾಗಿ ಬೆದರಿಸುತ್ತಿದ್ದ ಎಂದು ಸಂತೃಸ್ಥ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ಯುವತಿ ಐದು ತಿಂಗಳ ಗರ್ಭ ಧರಿಸಿರುವುದನ್ನು ಅರಿತ ಮನೆಯವರು ಈ ಬಗ್ಗೆ ಭಟ್ಟನ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋದಾಗ ಆತ ಯುವತಿಯನ್ನು ಹಾಗೂ ಆಕೆಯ ಮನೆಯವರನ್ನು ಕೊಲ್ಲುವುದಾಗಿ ಬೆದರಿಸುತ್ತಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ಈ ಘಟನೆಯಿಂದ ನೊಂದ ಯುವತಿಯ ಮನೆಯವರು ಆಕೆಯ ಗರ್ಭ ತೆಗೆಸಲೆಂದು ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದಾಗ ವೈದ್ಯರು ಗರ್ಭ ತೆಗೆಸಲು ಹಿಂದೇಟು ಹಾಕಿ ಮನೆಗೆ ಕಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆರೋಪಿಯ ಕಡೆಯವರು ಯುವತಿ ಹಾಗೂ ಮನೆಯವರನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿರಿಸಿದ್ದರು. ಆದರೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳೀಯರು ಕುಟುಂಬವನ್ನು ಹುಡುಕಾಡಿ ಪತ್ತೆ ಹಚ್ಚಿ ಆರೋಪಿಯ ವಿರುದ್ಧ ಬಜ್ಪೆ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸ್ಥಳೀಯರ ಸಹಕಾರದಿಂದಾಗಿ ಆರೋಪಿ ವಿರುದ್ಧ ಬಜ್ಪೆ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಪ್ರಕಾರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಹರಿಶ್ಚಂದ್ರ ಭಟ್ ದೇವಸ್ಥಾನದ ಅರ್ಚಕರ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಈತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈತನ ಮಕ್ಕಳು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಮನೆಕೆಲಸ ನಿರ್ವಹಿಸಲೆಂದು ಆರೋಪಿಯು ಯುವತಿಯೋರ್ವಳನ್ನು ಕೆಲಸಕ್ಕೆ ನೇಮಿಸಿದ್ದನೆನ್ನಲಾಗಿದೆ.

ಬಾಕ್ಸ್

ಪತ್ನಿ ಆತ್ಮಹತ್ಯೆಗೆ ಕಾರಣವೇನು?
ಕಳೆದ ಸೆಪ್ಟೆಂಬರ್ ತಿಂಳಲ್ಲಿ ಆರೋಪಿ ಹರಿಶ್ಚಂದ್ರ ಭಟ್ ಪತ್ನಿ ನಾಗಲಕ್ಷ್ಮಿ ಎಂಬವರು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಖಿನ್ನತೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಕರಣ ದಾಖಲಾಗಿದೆ. ಆದರೆ ಆರೋಪಿಯ ಕೃತ್ಯ ಬಯಲಾಗುತ್ತಿದ್ದಂತೆ ಈತನ ಪತ್ನಿಯ ಆತ್ಮಹತ್ಯೆಗೆ ಈತನ ಕಿರುಕುಳ ಅಥವಾ ದುಷ್ಪರೇರಣೆಯೇ ಕಾರಣವಿರಬಹುದೇ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *