ಮೂಡುಬಿದಿರೆ: ಮೂಡುಬಿದರೆ ಹೋಬಳಿಯ ಜಿ.ಪಂ ಹಾಗೂ ತಾ.ಪಂ ಕ್ಷೇತ್ರದಲ್ಲಿ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ. ಕೆಲವು ಬಿಲ್ಡರ್ಗಳು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ಇಬ್ಬರು ಬಿಲ್ಡರ್ಗಳು ಇದನ್ನು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಜನರಿಗೆ ಆಮಿಷವನ್ನು ಒಡ್ಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ವಿವಿಧ ರೀತಿಯಲ್ಲಿ ಅಮಿಷಯೊಡ್ಡುತ್ತಿದ್ದಾರೆ ಎಂದು ಪುತ್ತಿಗೆ ಜಿ.ಪಂ ಕ್ಷೇತ್ರ ಅಭ್ಯರ್ಥಿ ಸುಚರಿತ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಚುನಾವಣೆ ಪ್ರಚಾರ ಸಂದರ್ಭ ಕಾಂಗ್ರೆಸ್ ಅನುಸರಿಸುತ್ತಿರುವ ವಾಮಮಾರ್ಗ ಹಾಗೂ ಅದಕ್ಕೆ ಬೆಂಬಲಿಸುವವರ ಹೆಸರನ್ನು ಚುನಾವಣೆ ಬಳಿಕ ಬಹಿರಂಗ ಮಾಡುತ್ತೇನೆ. ನನ್ನ ಎದುರು ಸ್ಪರ್ಧಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ತೆರಿಗೆ ಕಟ್ಟಿರಲಿಲ್ಲ. ಆದರೆ ನಾಮಪತ್ರ ಪರಿಶೀಲನೆ ಸಂದರ್ಭ ಸಚಿವ ಕೆ.ಅಭಯಚಂದ್ರ ಜೈನ್ ಬಂದು ಹಣ ಕಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಗೂಂಡಾವರ್ತನೆ ತೋರಿದ್ದಾರೆ ಎಂದು ಸುಚರಿತ ಶೆಟ್ಟಿ ಆರೋಪಿಸಿದರು.
ಪ್ರಶಾಂತ್ ಪೂಜಾರಿಯನ್ನು ಗೂಂಡಾ ಎಂದು ಕರೆದಿದ್ದ ಮೀನುಗಾರಿಕೆ ಸಚಿವ, ಈಗ ಜಾತಿ ಆಧಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚಿಸುತ್ತಿದ್ದಾರೆ. ಪಾಲಡ್ಕ ಪರಿಸರದ ಅಯ್ದ ಕೆಲವು ರಸ್ತೆಗಳ ದುರಸ್ತಿಗೆ ಸಚಿವರಿಂದ ಯಾವುದೇ ಅನುದಾನ ಬಂದಿಲ್ಲ. ಒಂದು ವೇಳೆ ಅನುದಾನ ಬಂದಿದ್ದರೆ, ನಾನು ರಾಜಕೀಯ ತ್ಯಜಿಸುವೆ. ಮುಕ್ಕಡಪ್ಪು ರಸ್ತೆ ಅಭಿವೃದ್ಧಿಗೆ ನಾನು ಶ್ರಮಿಸಿದ್ದು, ಹೆಚ್ಚಿನ ಅನುದಾನ ಸಚಿವರಿಂದಲೇ ಬರಬೇಕಾಗಿದೆ ಎಂದರು.
ಬಿಜೆಪಿ ಮುಖಂಡರಾದ ಕೆ.ಪಿ.ಜಗದೀಶ್ ಅಧಿಕಾರಿ, ಭುವನಾಭಿರಾಮ ಉಡುಪ, ಕೆ.ಆರ್ ಪಂಡಿತ್, ಕೃಷ್ಣರಾಜ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿದ್ದರು.