ಬಂಟ್ವಾಳ: ತಾಲೂಕಿನಲ್ಲಿ ಶನಿವಾರ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, 10 ಗಂಟೆಯ ಸುಮಾರಿಗೆ ಶೇ.14 ರಷ್ಟು ಮತದಾನ ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತೊಡಂಬಿಲ ಚರ್ಚ್ ಶಾಲೆಯಲ್ಲಿ ಮತಚಲಾಯಿಸಿದರು. ಮಾಜಿ ಶಾಸಕ , ಸಜಿಪಮುನ್ನೂರು ಜಿ.ಪಂ.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿಯವರು ಗೋಳ್ತಮಜಲು ಪಂಚಾಯತ್ ಮತಗಟ್ಟೆಯಲ್ಲಿ ಮತಚಲಾಯಿಸಿದ್ದು, ಕೊಳ್ನಾಡು ಕ್ಷೇತ್ರದ ಬಿಜೆಪಿ ಮಹಮ್ಮದ್ ಮುಸ್ತಾಫಾ ಕಲ್ಲಡ್ಕ ಹಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಸಜಿಪಮುನ್ನೂರು ಕಾಂಗ್ರೇಸ್ ಅಭ್ಯರ್ಥಿ ಚಂದ್ರಪ್ರಕಾಶ ಶೆಟ್ಟಿ ತುಂಬೆ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಪುದು ಜಿ.ಪಂ. ಕಾಂಗ್ರೇಸ್ ಅಭ್ಯರ್ಥಿ ಪುದು ಗ್ರಾ.ಪಂ. ಮತಗಟ್ಟೆ , ಬಿಜೆಪಿ ಅಭ್ಯರ್ಥಿ ರವೀಂದ್ರ ಕಂಬಳಿ ನಂದಾರ ಪ್ರೌಢಶಾಲಾ ಮತಗಟ್ಟೆಯಲ್ಲಿ , ಎಸ್ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಪುದು ಗ್ರಾಮಪಂಚಾಯತ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರು, ಜಿಲ್ಲೆಯ ಎಲ್ಲಾ ಶಾಸಕರು ಅಭಿವೃದ್ದಿಯಲ್ಲಿ ಆರೋಗ್ಯಕರ ಪೈಪೋಟಿ ನಡೆಸಿ, ರಾಜ್ಯ ಸರ್ಕಾರದ ಅನುದಾನದಿಂದ ತಮ್ಮ ತಮ್ಮ ಭಾರೀ ಅಭಿವೃದ್ದಿ ಕಾರ್ಯಗಳನ್ನು ನಡೆಸಿದ್ದಾರೆ. ಇದನ್ನು ಗುರುತಿಸಿ ಜಿಲ್ಲೆಯ ಜನತೆ ಕಾಂಗ್ರೇಸ್ ಅನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ಸೋಲುವ ಭೀತಿಯಲ್ಲಿರುವ ಬಿಜೆಪಿಯವರು ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದು, ಪ್ರಜ್ಞಾವಂತ ನಾಗರೀಕರು ಇದಕ್ಕೆ ಬೆಂಬಲ ನೀಡುವುದಿಲ್ಲ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ಬಹುತೇಕ ತಾ.ಪಂ.ಆಡಳಿತ ಕಾಂಗ್ರೇಸ್ ಪಾಲಾಗಲಿದೆ ಎಂದವರು ಪ್ರತಿಕ್ರಿಯಿಸಿದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿಯವರು ಕಲ್ಲಡ್ಕದಲ್ಲಿ ಮಾತನಾಡಿ, ಕಳೆದ ಅವಧಿಯಲ್ಲಿ ದ.ಕ.ಜಿಲ್ಲಾ ಪಂಚಾಯತ್ ನಡೆಸಿದ ಅಭಿವೃದ್ದಿ ಕಾರ್ಯಗಳು, ಕೇಂದ್ರ ಸರ್ಕಾರದ ಸಾಧನೆಗಳು ಬಿಜೆಪಿಗೆ ವರದಾನವಾಗಲಿದೆ, ರಾಜ್ಯ ಸರ್ಕಾರದ ವೈಫಲ್ಯದಿಂದ ಬೇಸತ್ತಿರುವ ಜನತೆ ಬಿಜೆಪಿ ಕಡೆ ಒಲವು ತೋರಲಿದ್ದಾರೆ ಎಂದರು.







