ಬಂಟ್ವಾಳ: ಕುಡಿಯುವ ನೀರಿಗಾಗಿ ಮಂಗಳವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚೆರ್ಚೆಗೆ ಕಾರಣವಾಯಿತು. ಇಲ್ಲಿ ನೀರಿನ ಭಾಗ್ಯವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರನ್ನು ಪುರವಾಸಿಗಳಿಗೆ ಪೂರೈಸುವಲ್ಲಿ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿಪಕ್ಷ ವ್ಯಕ್ತಪಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಮುನೀಶ್ ಅಲಿ ವಿಷಯ ಪ್ರಸ್ತಾಪಿಸಿ, ಎತ್ತರ ಪ್ರದೇಶಗಳಿಗಾದರೂ ಸ್ವಲ್ಪ ಮಟ್ಟಿಗೆ ನೀರು ಪೂರೈಕೆಯಾಗುತ್ತಿದೆ. ಆದರೆ, ತಗ್ಗು ಪ್ರದೇಶವಾದ ಕೆಳಗಿನ ಪೇಟೆಗೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವುದು ವಿಪರ್ಯಾಸ ಎಂದು ಗಮನ ಸೆಳೆದರು. ಇದಕ್ಕೆ ದ್ವನಿ ಗೂಡಿಸಿದ ವಿಪಕ್ಷ ನಾಯಕ ಗೋವಿಂದ ಪ್ರಭು ಅವರು, ಕಳೆದ ಆರು ತಿಂಗಳಿನಿಂದ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ಚಾಪೆ ಹಾಕಿ ಮಳಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಂಜಿನಿಯರ್ ಡೊಮೇನಿಕ್ ಡಿಮೆಲೊ ಅವರು ಮಧ್ಯೆ ಪ್ರವೇಶಿಸಿ ಈಗಾಗಲೇ ತಯಾರಿಸಿದ ಎಲ್ಲ ನೀರಿನ ಕಾಮಗಾರಿಗಳನ್ನು ನೂರು ಶೇಕಡದಷ್ಟು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದಾಗ ಸದಸ್ಯ ಗೋವಿಂದ ಪ್ರಭು ಅವರು ಈ ಬಗ್ಗೆ ದಾಖಲೆ ಒದಗಿಸುವಂತೆ ಪಟ್ಟು ಹಿಡಿದರು. ಆಗ ಎಂಜಿನಿಯರ್ ಅವರು ಈ ಪೈಕಿ ಎಂಟು ಲಕ್ಷ ರೂ. ವಿನ ಕಾಮಗಾರಿ ಬಾಕಿ ಉಳಿದಿದೆ ಎಂದಾಗ ಕುಪಿತರಾದ ಸದಸ್ಯರು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಿರಾ ಎಂದು ತರಾಟೆಗೆ ತೆಗೆದುಕೊಂಡರು. ಅಕ್ರಮ ನೀರು ಸಂಪರ್ಕ ಕಡಿತಗೊಳಿಸುವಂತೆ ಹಲವು ಬಾರಿ ಸಭೆಯ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದ ಬಗ್ಗೆ ಸದಸ್ಯ ವಾಸು ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಧಿಕಾರಿ ಸುಧಾಕರ್ ಭಟ್ ಹಾಗೂ ಅಧ್ಯಕ್ಷ ರಾಮಕೃಷ್ಣ ಆಳ್ವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.
ರಾಜೀನಾಮೆಗೆ ಮುಂದಾದ ಪ್ರಭು: ಸಭೆಗೆ ತಪ್ಪು ಮಾಹಿತಿ ನೀಡುವ ಮೂಲಕ ಸದಸ್ಯರಿಗೆ ಅಗೌರವ ತೋರಿಸಲಾಗುತ್ತಿದೆ ಎಂದು ಆರೋಪಿಸಿ ಹಿರಿಯ ಸದಸ್ಯ ಗೋವಿಂದ ಪ್ರಭು ಅವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಸಂಗವು ನಡೆಯಿತು.
ಅಮ್ಟಾಡಿ ಗ್ರಾಮಕ್ಕೆ ಪುರಸಭೆಯಿಂದ ನೀರು ಪೂರೈಕೆಯಾಗುತ್ತಿದ್ದರೂ ಗ್ರಾಪಂನಿಂದ ಯಾವುದೇ ನೀರಿನ ಕರ ಪುರಸಭೆಗೆ ಪಾವತಿಯಾಗುತ್ತಿಲ್ಲ ಈ ಬಗ್ಗೆ ಪಂಚಾಯತ್ಗೆ ಪತ್ರ ಬರೆಯುವಂತೆ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪತ್ರ ರವಾನೆಯಾಗದಿರುವುದಕ್ಕೆ ಸದಸ್ಯ ಗೋವಿಂದ ಪ್ರಭು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯಧಿಕಾರಿಯವರು ಈಗಾಗಲೇ ಪತ್ರ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು. ಆದರೆ, ಪತ್ರದ ಪ್ರತಿಯನ್ನು ಸಭೆಯಲ್ಲಿ ಪರಿಶೀಲಿಸಿದಾಗ ಮಾ. 29ರಂದೇ ರವಾನೆಯಾಗಿರುವುದು ಬೆಳಕಿಗೆ ಬಂತು. ಇದರಿಂದ ಕುಪಿತರಾದ ಪ್ರಭು ಅವರು, ಅಧಿಕಾರಿಗಳು ಸದಸ್ಯರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದೀರಿ ಇದು ಚುನಾಯಿತ ಸದಸ್ಯರಿಗಾದ ಅವಮಾನ ಎಂದು ಕಿಡಿಕಾರಿದರಲ್ಲದೆ ಒಂದು ಹಂತದಲ್ಲಿ ರಾಜೀನಾಮೆ ನೀಡಲು ಮುಂದಾದರು. ಅಧ್ಯಕ್ಷ ರಾಮಕೃಷ್ಣ ಆಳ್ವ ಮಧ್ಯೆ ಪ್ರವೇಶಿಸಿ ಮುಂದಿನ ದಿನದಲ್ಲಿ ಈ ರೀತಿ ಎಡವಟ್ಟು ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿ ಸಮಾಧಾನಪಡಿಸಿದರು.
ಬಾಕಿ ವಸೂಲಿಗೆ ಒತ್ತಾಯ: ಪುರಸಭೆ ಆದಾಯ ಬರುವ ನಿಟ್ಟಿನಲ್ಲಿ ಈಗಾಗಲೇ ಪುರಸಭೆ ಲೆಕ್ಕಾಚಾರ ಮಾಡಿದಂತೆ 26 ಶಾಸ್ವತ ಪ್ರಚಾರ ಫಲಕಗಳಿಗೆ ಸಂಬಂಧಿಸಿ ಮೂರು ವರ್ಷಗಳ ಹಿಂದೆ ಕೈಗೊಂಡ ನಿರ್ಣಯದಂತೆ ಚದರ ಮೀಟರಿಗೆ ಮುನ್ನೂರು ರೂಪಾಯಿಯಂತೆ ವಸೂಲಿ ಮಾಡಬೇಕು ಎಂದು ಸದಸ್ಯ ದೇವದಾಸ ಶೆಟ್ಟಿಯವರು ಒತ್ತಾಯಿಸಿದರು. ಈ ಹಿಂದೆ ತಮ್ಮದೇ ಆಡಳಿತ ಈ ನಿರ್ಣಯ ಬಹುಮತದಿಂದ ಕೈಗೊಂಡಿದೆ. ಆ ಸಂದರ್ಭದಲ್ಲೇ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಈಗ ತಾವೇ ಇದು ಅವೈಜ್ಞಾನಿಕವೆಂದು ಹೇಳುತ್ತಿರುವುದು ನಾಚಿಕೆಗೇಡು. ಇದು ಹಣಕಾಸಿನ ವ್ಯವಹಾರ ಮತ್ತು ಪುರಸಭೆಗೆ ಆದಾಯದ ದೃಷ್ಟಿಯಿಂದ ಈ ಹಿಂದಿನ ನಿರ್ಣಯದಂತೆ ಸಂಬಂಧಿಸಿದವರಿಂದ ಹಣ ವಸೂಲಿ ಮಾಡಲೇ ಬೇಕು. ಮುಂದಿನ ತಿಂಗಳಿನಿಂದ ಹೊಸ ದರ ನಿಗದಿಯಂತೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಇದೇ ವೇಳೆ ದೇವದಾಸ ಶೆಟ್ಟಿ ಅವರು ಮೊದಲ ಆಡಳಿತಾವಧಿಯಲ್ಲಿ ಕೈಗೊಂಡ ನಿರ್ಣಯಗಳ ಪೈಕಿ ಶೇಕಡ 30ರಷ್ಟು ಕೂಡಾ ಅನುಷ್ಠಾನವಾಗದೆ ಪುಸ್ತಕದದಲ್ಲಿಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೇಶನ ರೈತರಿಗೆ ಜಮೀನು ಹಾಗೂ 24*7 ವಿದ್ಯುತ್ ಪೂರೈಕೆಗೆ ಟ್ರಾನ್ಸ್ಫಾರ್ಮರ್ ಅಳವಡಿಸಲು ಜಮೀನು ಗುರುತಿಸುವಂತೆ ಸದಸ್ಯ ವಾಸು ಪೂಜಾರಿ ಒತ್ತಾಯಿಸಿದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಗಂಗಾಧರ, ಜಗದೀಶ್ ಕುಂದರ್, ಬಿ.ಮೋಹನ್, ಬಾಸ್ಕರ್ ಟೈಲರ್, ವಸಂತಿ ಚಂದಪ್ಪ, ಸುಗುಣ ಕಿಣಿ, ಯಾಸ್ಮೀನ್ ಮೊದಲಾದವರು ಚರ್ಚೆ ಯಲ್ಲಿ ಪಾಲ್ಗೊಂಡರು. ಮುಖ್ಯಧಿಕಾರಿ ಸುಧಾಕರ್ ಸಭಾ ಕಲಾಪ ನಡೆಸಿದರು.
ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ಅವರು ವಿಪಕ್ಷ ಸದಸ್ಯರ ಸಾಲಿನಲ್ಲಿ ಕುಳಿತು ಸಭೆಯಲ್ಲಿ ಗಮನ ಸೆಳೆದರು. ಪ್ರತೀ ಸಾಮಾನ್ಯ ಸಭೆಯಲ್ಲಿ ಕ್ರಿಯಾಶೀಲವಾಗಿ ಚರ್ಚೆಯಲ್ಲಿ ಭಾಗವಹಿಸಿ ಆಡಳಿತ ಪಕ್ಷವನ್ನು ಸಮರ್ಥಿಸುತ್ತಿದ್ದ ಅವರು ಈ ಬಾರಿಯ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರಂತೆ ಚರ್ಚೆಯಲ್ಲಿ ಪಾಲ್ಗೊಂಡರು.
ಹಾಗೆಯೇ ನೀರಿನ ಸಮಸ್ಯೆಗೆ ಸಂಬಂಧಿಸಿ ಚರ್ಚೆಯ ವೇಳೆ ಸದಸ್ಯ ಇಕ್ಬಾಲ್ ಅವರು ಅಧ್ಯಕ್ಷರ ಪರ ವಕಾಲತು ವಹಿಸಿ ಮಾತನಾಡಿದಾಗ ಮಧ್ಯ ಪ್ರವೇಶಿಸಿದ ಸದಸ್ಯ ಸದಾಶಿವ ಬಂಗೇರ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಸಂವಿಧಾನಿಕ ಪದ ಬಳಸಿದರು.
ಇದೇ ವೇಳೆ ಇವರ ಪರ ಚಂಚಲಾಕ್ಷಿ ನಿಂತರೆ, ಇಕ್ಬಾಲ್ ಪರ ಜಸಿಂತ ಹಾಗೂ ಮುಹಮ್ಮದ್ ಶರೀಫ್ ವಾದಿಸಿದರು. ಆಗ ಚಂಚಲಾಕ್ಷಿ, ಜಸಿಂತ, ಶರೀಫ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲೂ ಅಸಾವಿಂದಾನಿಕ ಪದ ಬಳಕೆ ಆಯ್ತು. ಸದಸ್ಯ ಪ್ರವೀಣ್ ಅವರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರೆ, ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಚರ್ಚೆಗೆ ಆಸ್ಪದವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿ ಚರ್ಚೆಗೆ ತೆರೆ ಎಳೆದರು. ಈ ಪ್ರಸಂಗವನ್ನು ಗಮನಿಸಿ ವಿಪಕ್ಷ ಸದಸ್ಯರು ಮುಸಿ ಮುಸಿ ನಕ್ಕರು.
ಇತ್ತ ಸದಾಶಿವ ಬಂಗೇರ ಬಂಟ್ವಾಳ ಪುರಸಭೆ ಭ್ರಷ್ಟಾಚಾರದಿಂದ ಕೂಡಿದ್ದು, ಭ್ರಷ್ಟಾಚಾರ ಮುಕ್ತ ಪುರಸಭೆಯಾಗುವ ತನಕ ಗೌರವ ಧನ, ಚಾ, ಮತ್ತು ಊಟ ಸ್ವೀಕರಿಸುವುದಿಲ್ಲ ಎಂದು ಹಾಜರಿ ಪುಸ್ತಕದಲ್ಲಿ ಉಲ್ಲೇಖಿಸುವ ಮೂಲಕ ಅಚ್ಚರಿ ಮೂಡಿಸಿದರಲ್ಲದೆ ಸಭೆಯ ಅರ್ಧದಿಂದಲೇ ಹೊರ ನಡೆದರು. ಇವರು ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಶಿಯಾಗಿದ್ದು, ಇದು ಕೈ ತಪ್ಪಿದ ಬಳಿಕ ಇವರು ಸಚಿವರ ಸಹಿತ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದಾರೆ.



