ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ 1993ಲ್ಲಿ ಅಂದಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರಿಂದ ಉದ್ಘಾಟನೆಗೊಂಡ 13 ಅಡಿ ಎತ್ತರದ ತುಂಬೆ ಅಣೆಕಟ್ಟೆಯಲ್ಲಿ ಕಳೆದ 2003ರ ಬಳಿಕ ಇದೇ ಮೊದಲ ಬಾರಿಗೆ 3.9ಅಡಿಗೆ ಇಳಿಮುಖ ಕಂಡಿದ್ದ ನೀರಿನ ಮಟ್ಟವು ಕಳೆದೆರಡು ದಿನಗಳಿಂದ ಏರಿಕೆಯಾಗತೊಡಗಿದ್ದು, ನೀರಿನ ಒಳ ಹರಿವು ಕೂಡಾ ಕಂಡು ಬಂದಿದೆ. ಕಳೆದ ಒಂದು ವಾರದ ಹಿಂದೆ ಕಾಣಿಸಿಕೊಂಡ ದಿಢೀರ್ ಗಾಳಿ ಮಳೆ ಜೊತೆಗೆ ದಿಶಾ ಮತ್ತು ನೆಕ್ಕಿಲಾಡಿ ಕಿರು ಜಲವಿದ್ಯುತ್ ಘಟಕದಿಂದಲೂ ಹರಿಯ ಬಿಟ್ಟ ನೀರು ಇಲ್ಲಿಗೆ ಬಂದು ತಲುಪಲು ಸಾಧ್ಯವಾಗಿದೆ. ಇಲ್ಲಿನ ಅಣೆಕಟ್ಟೆ ನೀರಿನ ಮಟ್ಟ ದಿನೇ ದಿನೇ ಕುಸಿತಕ್ಕೀಡಾದ ಸಂದರ್ಭದಲ್ಲಿ ಮಂಗಳೂರಿನ ಜನತೆಗೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವಂತಾಗಿತ್ತು. ಇದೀಗ ಬುಧವಾರ ಸಂಜೆ ನೀರಿನ ಮಟ್ಟ 8.5 ಅಡಿಗೆ ಏರಿಕೆ ಕಂಡಿರುವುದು ಮಂಗಳೂರು ಮಹಾನಗರ ಪಾಲಿಕೆ ಮತ್ತು ಇಲ್ಲಿನ ಪಂಪ್‍ಹೌಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಂತಸಕ್ಕೆ ಕಾರಣವಾಗಿದೆ.
![]()
ಈ ಬಾರಿ ಏಪ್ರಿಲ್ ತಿಂಗಳ ಕೊನೆಗೆ ಮತ್ತು ಮೇ ತಿಂಗಳ ಆರಂಭದಲ್ಲಿ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಅತಿಯಾಗುತ್ತಿದ್ದಂತೆಯೇ ಇಲ್ಲಿನ ಸಿಬ್ಬಂದಿಗಳಿಗೂ ನದಿಯುದ್ದಕ್ಕೂ ಬಂಡೆ ಮತ್ತಿತರ ತಡೆಗಳನ್ನು ಬಿಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದು ಸೇರಿದಂತೆ ಶಂಭೂರು ಎಎಂಆರ್, ಸರಪಾಡಿ ಎಂಆರ್‍ಪಿಎಲ್ ಮತ್ತಿತರ ಘಟಕಗಳು ನೀರು ಮೇಲೆತ್ತದಂತೆ ರಾತ್ರಿಪಾಳಿ ಕಾಯುವ ಕಾಯಕವೂ ದೊರೆತಿತ್ತು. ಇದೀಗ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆಯೇ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿವಿಧ ದೈವ ದೇವರಿಗೆ ಹೇಳಿದ ಹರಿಕೆ ತೀರಿಸಲು ಮುಂದಾಗಿರುವುದು ಕಂಡು ಬಂದಿದೆ.
ಇನ್ನೊಂದೆಡೆ ಕಳೆದ ವರ್ಷ ಮೇ. ತಿಂಗಳಿನಲ್ಲಿ ಕಾಣಿಸಿಕೊಂಡಿದ್ದ ದಿಢೀರ್ ಮಳೆಗೆ ಎರಡೆರಡು ಬಾರಿ ಹೊಸ ಅಣೆಕಟ್ಟೆ ಬಳಿ ಕೃತಕ ರಸ್ತೆ ಸಹಿತ ಪಂಪ್ ಮತ್ತಿತರ ಪರಿಕರಗಳು ಕೊಚ್ಚಿ ಹೋಗಿದ್ದು, ಈ ಬಾರಿ ಬಹುತೇಕ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮನಕ್ಕೆ ಸಿದ್ಧಗೊಳ್ಳುತ್ತಿದೆ.
ಇನ್ನೊಂದೆಡೆ ಕಳೆದ 2009ರಲ್ಲಿ ಏಳು ಮೀಟರ್ ಎತ್ತರದ ಎರಡನೇ ಅಣೆಕಟ್ಟೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳುವ ವೇಳೆ ತಾಲ್ಲೂಕಿನ ಕಳ್ಳಿಗೆ, ಬಿ.ಮೂಡ, ನರಿಕೊಂಬು, ಪಾಣೆಮಂಗಳೂರು, ಸಜಿಪಮುನ್ನೂರು ಗ್ರಾಮಗಳಲ್ಲಿ 10.34 ಎಕರೆ ಸರ್ಕಾರಿ ಮತ್ತು 18.53 ಎಕರೆ ಖಾಸಗಿ ಜಮೀನು ಮುಳುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿನ ನಾಗರಿಕರು ಮತ್ತು ಮುಳುಗಡೆ ಭೀತಿ ಎದುರಿಸುತ್ತಿದ್ದ ಕೃಷಿಕರು ಹೋರಾಟಕ್ಕೆ ಮುಂದಾಗುತ್ತಿದ್ದಂತೆಯೇ ಒಟ್ಟು 250ಕ್ಕೂ ಮಿಕ್ಕಿ ಎಕರೆ ಕೃಷಿ ಜಮೀನು ಮುಳುಗಡೆಯಾಗುತ್ತಿದೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಮತ್ತು ಪರಿಹಾರ ನೀಡಿಲ್ಲ ಎಂಬ ಕಾರಣಕ್ಕಾಗಿ ಎರಡೆರಡು ಬಾರಿ ಸ್ಥಗಿತಗೊಂಡಿದ್ದ ಮುಳುಗಡೆ ಜಮೀನು ಸರ್ವೆ ಕಾರ್ಯ ಮತ್ತೆ ಕಳ್ಳಿಗೆ ಗ್ರಾಮದಲ್ಲಿ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.