ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಪಾಣೆಮಂಗಳೂರು ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬೋಳಂಗಡಿಯ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.
ಎಸ್.ಐ.ಓ ಜಿಲ್ಲಾ ಕಾರ್ಯದರ್ಶಿ ಅಸ್ಲಂ ಪಂಜಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರದ ರಕ್ಷಣೆ ಪ್ರತಿಯೋರ್ವರ ಹೊಣೆಗಾರಿಕೆಯಾಗಿದೆ. ನೀರಿಲ್ಲದೆ ಬವಣೆ ಪಡುವುದಕ್ಕೆ ನಾವೆಲ್ಲರೂ ಕಾರಣರು. ಇಂದು ಒಂದು ಮರ ನೆಟ್ಟರೆ ಹತ್ತಾರು ಮರಗಳನ್ನು ಅಭಿವೃದ್ಧಿ ಯ ಹೆಸರಿನಲ್ಲಿ ಉರುಳಿಸುವ ಕಾರ್ಯ ಮಾಡುತ್ತಿದ್ದರೂ ನಾವೆಲ್ಲರೂ ಮೂಕ ಪ್ರೇಕ್ಷಕರಾಗಿರುವುದು ವಿಷಾದನೀಯ. ಆದ್ದರಿಂದ ಪರಿಸರ ಸಂರಕ್ಷಣೆಯನ್ನು ಮಾಡಲು ನಾವೆಲ್ಲರೂ ಜಾಗೃತರಾಗಬೇಕು. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಮನೋಭಾವವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್.ಐ.ಓ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಎಸ್.ಐ.ಓ ದ.ಕ. ಜಿಲ್ಲಾಧ್ಯಕ್ಷ ರಫೀಕ್ ಬೀದರ್ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಸೋಲಿಡಾರಿಟಿ ಯೂತ್ ಮೂಮೆಂಟ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ಎಂ.ಎಚ್. ಅಬ್ದುಲ್ ಶುಕೂರ್, ಮುಸ್ತಫಾ ಎಂ.ಎಚ್. ಬೋಳಂಗಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಲೀಂ ಬೋಳಂಗಡಿ, ಎಸ್.ಐ.ಓ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಇರ್ಷಾದ್ ವೇಣೂರ್, ಪಾಣೆಮಂಗಳೂರು ಎಸ್‌ಐಓ ಪದಾಧಿಕಾರಿಗಳಾದ ಮುತಹ್ಹರ್ ಬೋಳಂಗಡಿ, ತಮೀಝ್ ಕಾರಾಜೆ, ಇಸ್ಮಾಯೀಲ್ ಮೆಲ್ಕಾರ್, ಮುಬಾರಿಶ್ ಬೋಳಂಗಡಿ, ಸ್ಥಳೀಯರಾದ ತಾರಾನಾಥ್, ಯೂಸುಫ್, ಹೈದರ್, ಮುಬಾರಕ್ ಪಿ.ಡಿ, ಅನ್ಸಾರ್ ಕೌಡೇಲ್, ಇಬ್ರಾಹಿಮ್ ಮತ್ತಿತರರು ಉಪಸ್ಥಿತರಿದ್ದರು.
ಎಸ್ ಐ ಓ ಪಾಣೆಮಂಗಳೂರು ಘಟಕಾಧ್ಯಕ್ಷ ಮುಹಮ್ಮದ್ ದಾನಿಶ್ ಚೆಂಡಾಡಿ ನಿರೂಪಿಸಿ, ಧನ್ಯವಾದವಿತ್ತರು.


