ಬಂಟ್ವಾಳ: ದನ, ವಾಹನ, ಅಡಿಕೆ ಕಳ್ಳತನ ಪ್ರಕರಣದ 6 ಮಂದಿ ಕುಖ್ಯಾತ ಆರೋಪಿಗಳನ್ನು ವಿಟ್ಲ ಪೊಲೀಸರ ತಂಡ ವಿಟ್ಲ ಸಮೀಪದ ಚಂದಳಿಕೆಯಲ್ಲಿ ಬುಧವಾರ ಬಂಧಿಸಿ 20 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯುವ ಮೂಲಕ ಸಾರ್ವಜನಿಕರು ಪ್ರತಿಭಟನೆಗೆ ಸಿದ್ದವಾಗಿದ್ದ 8 ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ಜ್ಯುವೆಲ್ಲರಿ ಅಂಗಡಿಯಿಂದ ಲಕ್ಷಾಂತರ ರೂ. ಕಳ್ಳತನ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಪ. ಬಂಗಾಳದಲ್ಲಿ ಬಂಧಿಸಿದ್ದಾರೆ. ಬಿ.ಸಿ.ರೋಡಿನ ಅಪೂರ್ವ ಜ್ಯುವೆಲ್ಲರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಪಿಂಟೂ ರಾವಂತ್ ಸುಮಾರು 229 ಗ್ರಾ ಚಿನ್ನಾಭಾರಣಗಳನ್ನು ಕಳವುಗೈದು ಪರಾರಿಯಾಗಿರುತ್ತಾನೆ. ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುತ್ತಾನೆ. ನಗರ ಠಾಣಾ ಪೋಲೀಸರು ಆತನನ್ನು ಪ. ಬಂಗಾಲದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕುಡ್ತಮುಗೇರು ಮೂಲದ ಮಂಜೇಶ್ವರ ಬಾಕ್ರಬೈಲು ನಿವಾಸಿ ಬಾರಿಕ್ (32), ಕೊಡುಂಗಾಯಿ ರಾಧುಕಟ್ಟೆ ನಿವಾಸಿ ಬಶೀರ್ ಯಾನೆ ರಾಧುಕಟ್ಟೆ ಬಶೀರ್ (25), ಕಡಂಬು ಕ್ವಾಟ್ರಸ್ ನಿವಾಸಿ ಅಶ್ರಫ್ ಯಾನೆ ಅಸ್ರು (19), ರಾಧುಕಟ್ಟೆ ನಿವಾಸಿ ಸೈಪುದ್ದೀನ್ ಯಾನೆ ಸೈಪು (19), ಇರಾ ಬಾಳೆಪುಣಿ ನಿವಾಸಿ ಜಾಬಿರ್ (26), ಕುಡ್ತಮುಗೇರು ಕರೈ ನಿವಾಸಿ ಜುಬೈರ್ಕೆ (23) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 2 ಕಾರು, 1 ಪಿಕಪ್, 1 ರಿಕ್ಷಾ, 1 ದನ, 15 ಕಿಂಟಾಲ್ ಅಡಿಕೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಧುಕಟ್ಟೆ ಬಶೀರ್ ಮೇಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 19 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿರುವುದಲ್ಲದೇ, ಕೇರಳದ ಕಾಸರಗೋಡು ಮತ್ತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ ದಾಖಲಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಗುಜರಾತ್ನಲ್ಲಿ ಬಂಧಿಸಿಲ್ಪಟ್ಟು ಸುಮಾರು ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿ, 7 ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ. ಪರ್ತಕರ್ತ ವಿಟಿ ಪ್ರಸಾದ್ ಕೊಲೆಯ ಯತ್ನ ಪ್ರಕರಣ ಆರೋಪಿಯಾದ ಬಾರಿಕ್ ಜೈಲು ಶಿಕ್ಷೆ ಅನುಭವಿಸಿದ್ದ. ವಿಟ್ಲ ಠಾಣೆಯ ರೌಡಿ ಶೀಟರ್ ಆಗಿರುವ ಆತ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರಂತರವಾಗಿ ಬಾಗಿಯಾಗಿದ್ದ. ಜಾಬಿರ್ ಎಂಬಾತ ಕೇರಳ ಮಂಜೇಶ್ವರ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣದ ಆರೋಪಿಯಾಗಿದ್ದಾನೆ.
ಕೊಲ್ನಾಡು ಗ್ರಾಮದ ಕುಡ್ತಮುಗೇರು ಪೇಟೆಯಲ್ಲಿನ ಅಡಿಕೆ ಅಂಗಡಿ ಕಳ್ಳತನ, ಕುಡ್ತಮುಗೇರು ಶ್ರೀನಿವಾಸ ಆಚಾರ್ಯ ಅವರ ಮನೆಯಲ್ಲಿ ಸಾಕು ನಾಯಿಗಳಿಗೆ ವಿಷ ಉಣಿಸಿ ಅಡಿಕೆ ಕಳ್ಳತನ, ಸುರಿಬೈಲ್ ಮಸೀದಿಯ ಆವರಣದಲ್ಲಿರಿಸಿದ ಅಡಿಕೆ ಕಳ್ಳತನ, ಕೊಡಂಗೆ ಎರ್ಮುನಿಲೆ ರತ್ನಾಕರ ಶೆಟ್ಟಿ ಅವರ ಮನೆಯಂಗಳದಲ್ಲಿ ಸಾಕುನಾಯಿಗಳಿಗೆ ವಿಷ ಹಾಕಿ ಅಡಿಕೆ ಕಳ್ಳತನ, ಕಂಬಳಬೆಟ್ಟು ದುರ್ಗಾ ಬಳಿಯ ಅಡಿಕೆ ಅಂಗಡಿ ಕಳ್ಳತನ, ಅಳಿಕೆ ಮಡಿಯಾಲ ಮಹೇಶ್ ಭಟ್ ಅವರ ಮನೆ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಜಾನುವಾರು ಕಳ್ಳತನ, ಅಳಕೆಮಜಲು ಪೆಲತ್ತಿಂಜ ಸಂಜೀವ ಗೌಡ ಅವರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಒಂದು ವರ್ಷದಿಂದ ಹಟ್ಟಿಯಲ್ಲಿ ಕಟ್ಟಿದ್ದ ದನಗಳ ಕಳವು, ವಾಹನ ಕಳವು, ಸಾಕು ಪ್ರಾಣಿಗಳಿಗೆ ವಿಷ ಉಣಿಸಿ ಮನೆಯಂಗಳದಲ್ಲಿ ಶೇಖರಿಸಿದ ಅಡಿಕೆ ಕಳವು ಪ್ರಕರಣ ವಿಟ್ಲ ಠಾಣೆಯ ವ್ಯಾಪ್ತಿಯಲ್ಲಿ ಹೆಚ್ಚಲಾರಂಭಿಸಿತ್ತು. ಈ ಪ್ರಕರಣಗಳ ಬೆನ್ನತ್ತಿದ ವಿಟ್ಲ ಪೊಲೀಸರಿಗೆ 6 ಮಂದಿ ಕುಖ್ಯಾತರ ಬಗ್ಗೆ ಸಿಕ್ಕಿದ್ದು, ಅವರ ಚಲನವಲನದ ಮೇಲೆ ನಿಗಾ ಇಟ್ಟಿದ್ದರು. ಬುಧವಾರ ಬೆಳಗ್ಗಿನ ಜಾವ ಪುತ್ತೂರು ಕಡೆಗೆ 2 ಕಾರುಗಳಲ್ಲಿ ತೆರಳುತ್ತಿದ್ದ ಸಂದರ್ಭ ವಿಟ್ಲ ಪೊಲೀಸರ ತಂಡ ಬಂಧಿಸಿದೆ.
ದ ಕ ಜಿಲ್ಲಾ ಪೊಲೀಸ್ ಅಧೀಕ್ಷ ಭೂಷಣ್ ಜಿ ಬೋರಸೆ ಅವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಜಿನ್ನಪ್ಪ ಗೌಡ, ರಾಮಚಂದ್ರ, ಜಯಕುಮಾರ್, ಪ್ರವೀಣ್ ರೈ, ರಕ್ಷಿತ್ ರೈ, ಪ್ರವೀಣ್ ಕುಮಾರ್, ರಮೇಶ್, ಲೋಕೇಶ್, ಸತೀಶ್, ಭವಿತ್ ರೈ, ಪ್ರಮೀಳಾ ಕೆ ಎಸ್, ಚಾಲಕ ರಘುರಾಮ, ಜಿಲ್ಲಾ ಕಂಪ್ಯೂಟರ್ ವಿಭಾಗದ ಸಂಪತ್, ದಿವಾಕರ್ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.


