ಮೂಡುಬಿದಿರೆ: ಪತ್ರಿಕಾ ಪ್ರತಿನಿಧಿಗಳು ಸಾಮಾಜಿಕ ಬದಲಾವಣೆಯ ಸೂಕ್ಷ್ಮತೆಯ ಅರಿವು ಹೊಂದಿರಬೇಕು. ಕೇವಲ ವರದಿಗಾರರಾಗದೇ ಸಮಚಿತ್ತತೆ ಹೊಂದಿರುವ ಚರಿತ್ರೆಯನ್ನು ದಾಖಲಿಸುವ ಜವಾಬ್ದಾರಿಯುತ ಪತ್ರಕರ್ತರಾಗಬೇಕು. ಪ್ರಜಾಪ್ರಭುತ್ವದ ಅಂಗಗಳಲ್ಲಿ ಒಂದೆನಿಸಿದ ಮಾಧ್ಯಮರಂಗ ಇಂದಿನ ವ್ಯವಸ್ಥೆಯಲ್ಲಿ ಪ್ರಧಾನ ಅಂಗವೆಂಬಂತೆ ಬೆಳೆಯುತ್ತಿದೆ. ಆದರೆ ಇದರ ಯಶಸ್ಸು ಪತ್ರಿಕೆಗಳು ಮತ್ತು ಪತ್ರಕರ್ತರ ವಸ್ತುನಿಷ್ಠತೆ ಮತ್ತು ಪಾರದರ್ಶಕತೆಯನ್ನು ಅವಲಂಬಿಸಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.

mbd_june1_1 (1)ಅವರು ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘಟನೆ ಮೂಡುಬಿದಿರೆ ಪ್ರೆಸ್ಕ್ಲಬ್ ವತಿಯಿಂದ ಶುಕ್ರವಾರ ಸಮಾಜಮಂದಿರದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ‘ಪ್ರಚಲಿತ ಸಾಮಾಜಿಕ ಬೆಳವಣಿಗೆಗಳು ಮತ್ತು ಪತ್ರಕರ್ತರ ಜವಾಬ್ದಾರಿ’ ಕುರಿತು ವಿಶ್ರಾಂತ ಪತ್ರಕರ್ತ ಸದಾನಂದ ವಿ. ಹೆಗಡೆ ಕಟ್ಟೆ ಪ್ರಾಯೋಜಿತ ದತ್ತಿ ನಿಧಿ ಉಪನ್ಯಾಸ ನೀಡಿದ ಡಾ. ಕುರಿಯನ್ ಅವರು ಮಾಧ್ಯಮಗಳು ವ್ಯಕ್ತಿ ವೈಭವೀಕರಣಕ್ಕೆ ಮುಂದಾದಾಗ ಸಾಮಾಜಿಕ ಬೆಳವಣಿಗೆ ಕುಂಠಿತವಾದಂತಾಗುತ್ತದೆ. ನಾಗರೀಕತೆಯ ಬೆಳವಣಿಗೆಯಲ್ಲಿ ಬೆಂಕಿ ಮತ್ತು ಚಕ್ರದ ಬೆಳವಣಿಗೆಯ ಜತೆಗೆ ಅಕ್ಷರಗಳು ಇಂದು ಸಮಾಜದಲ್ಲಿ ಕ್ರಾಂತಿ ಮಾಡಿವೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಾಸಕ ಕೆ. ಅಭಯಚಂದ್ರ ಜೈನ್ ಮಾಧ್ಯಮದ ಕುರಿತು ಇರುವ ಭಯ ಭ್ರಷ್ಟಾಚಾರ ಕಡಿವಾಣಕ್ಕೆ ನೆರವಾಗುತ್ತಿದೆ ಎಂದರು. ಮೂಡುಬಿದಿರೆಯ ಪ್ರೆಸ್ ಕ್ಲಬ್ ದಿನಾಚರಣೆಗೆ ತಮ್ಮ ತಂದೆ ದಿ.ಎಂ.ಕೆ.ಅನಂತರಾಜ್ ಹೆಸರಲ್ಲಿ ರೂ 25 ಸಾವಿರ ದತ್ತಿನಿಧಿ ಕೊಡುಗೆ ಪ್ರಕಟಿಸಿದ ಅವರು ಪ್ರೆಸ್ ಕ್ಲಬ್ಗೆ ನಿವೇಶನ ದೊರಕಿಸುವಲ್ಲಿ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದರು.

ಸಮ್ಮಾನ: ಪತ್ರಕರ್ತರಾಗಿದ್ದು ಪ್ರಸ್ತುತ ಮಂಗಳೂರು ವಿ.ವಿಯ ಎಸ್ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಧನಂಜಯ ಕುಂಬ್ಳೆ ಅವರನ್ನು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕುಂಬ್ಳೆ ಸಮಾಜದಲ್ಲಿ ಒಳಿತು ಹೆಚ್ಚಿನ ಪ್ರಚಾರಕ್ಕೆ ಸಿಗುವುದಿಲ್ಲ. ಆದರೆ ಮಾತೃಸ್ವರೂಪಿಯಾಗಿರುವ ಸಾಮಾಜಿಕ ಪ್ರೀತಿಯ ಶಕ್ತಿ ಬೆಳವಣಿಗೆಗೆ ಸ್ಫೂರ್ತಿ ಯಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಹವ್ಯಾಸೀ ಪತ್ರಕರ್ತರಾಗಿದ್ದ ಮೂಡುಬಿದಿರೆ ಆರಕ್ಷಕ ಠಾಣೆಯ ಎ.ಎಸ್.ಐ. ಕೃಷ್ಣ ಎಂ.ಸಿ ಪರವಾಗಿ ಅವರ ಪುತ್ರ ಕೌಶಿಕ್ರಿಗೆ ಹಾಗೂ ಇತ್ತೀಚಿಗೆ ಭಾರತ ಜ್ಯೋತಿ ಪ್ರಶಸ್ತಿ ಪುರಸ್ಕೃತ ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರಿಗೆ ಪ್ರೆಸ್ ಕ್ಲಬ್ ನಲ್ಲಿ  ಗೌರವ ಸಮರ್ಪಿಸಲಾಯಿತು.

ಪ್ರೆಸ್ ಕ್ಲಬ್ ಅಧ್ಯಕ್ಷ ಧನಂಜಯ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು.ಪ್ರೆಸ್ ಕ್ಲಬ್ ಉಪಾಧ್ಯಕ್ಷ ಜೈಸನ್ ತಾಕೊಡೆ ಸ್ವಾಗತಿಸಿದರು. ಕೋಶಾಧಿಕಾರಿ ಪ್ರೇಮಾಶ್ರೀ  ಕಲ್ಲಬೆಟ್ಟು, ಸಂಘಟನಾ ಕಾರ್ಯದರ್ಶಿ  ಅಶ್ರಫ್ ವಾಲ್ಪಾಡಿ, ಪ್ರಸನ್ನ ಹೆಗ್ಡೆ ಸನ್ಮಾನಿತರನ್ನು ಪರಿಚಯಿಸಿದರು.  ಪದ್ಮಶ್ರೀ ಭಟ್ ನಿಡ್ಡೋಡಿ ಸ್ವರಚಿತ ಕವನ ವಾಚಿಸಿದರು. ಕಾರ್ಯದರ್ಶಿ  ಯಶೋಧರ ವಿ. ಬಂಗೇರ ವಂದಿಸಿದರು. ಎಂ. ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *